ಶಾಸಕ ಆರ್.ವಿ.ದೇಶಪಾಂಡೆಯವರಿಂದ ನೂತನ ವಾಣಿಜ್ಯ ಮಳಿಗೆಗಳ‌ ಉದ್ಘಾಟನೆ

ಹಳಿಯಾಳ : ತಾಲೂಕಿನ ಕಾವಲವಾಡದಲ್ಲಿರುವ ಶ್ರೀ.ಸೋಮೇಶ್ವರ ವಿವಿಧೋದ್ದೇಶ ಸಹಕಾರಿ ಕೃಷಿ ಪತ್ತಿನ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳನ್ನು ಶಾಸಕರಾದ ಆರ್ ವಿ ದೇಶಪಾಂಡೆ ಅವರು ಇಂದು ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ವಿ ದೇಶಪಾಂಡೆ ಅವರು ಹಳ್ಳಿ ಪ್ರದೇಶದಲ್ಲಿ ರೈತರಿಗೆ ತ್ವರಿತಗತಿಯಲ್ಲಿ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಕೃಷಿ ಸಹಕಾರಿ ಸಂಘಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಸಂಘದಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಹಾರ ಚಟುವಟಿಕೆಗಳಿದ್ದಾಗ ಮಾತ್ರ ಸಂಘ ಪ್ರಗತಿಯೆಡೆಗೆ ಸಾಗಲು ಸಾಧ್ಯವಿದೆ. ನೂತನವಾಗಿ ಉದ್ಘಾಟನೆಗೊಂಡ ಮಳಿಗೆಗಳು ಈ ಭಾಗದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಉಪಯುಕ್ತ ವೇದಿಕೆಯಾಗುವಂತಾಗಲಿ ಎಂದು ಕರೆ ನೀಡಿ ನೂತನ ಮಳಿಗೆಗಳಿಗೆ ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ.ಸೋಮೇಶ್ವರ ವಿವಿಧೋದ್ದೇಶ ಸಹಕಾರಿ ಕೃಷಿ ಪತ್ತಿನ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.