ಹೊನ್ನಾವರ : ದೇಶದ ಸ್ವಾತಂತ್ರ್ಯ ಹೋರಾಟದ ಪಿತಾಮಹ ಮಹಾತ್ಮಾ ಗಾಂಧೀ ಮತ್ತು ಅತ್ಯಂತ ಸರಳ ವ್ಯಕ್ತಿತ್ವದ, ಭಾರತದ ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರೀಯವರ ತತ್ವ ಮತ್ತು ಆದರ್ಶಗಳನ್ನು ರಾಷೃದ ಜನತೆ ಸೂರ್ಯಚಂದ್ರನಿರುವವರೆಗೂ ಮರೆಯಲಾರರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ನುಡಿದರು.
ಅವರು ಇಂದು ಹೊನ್ನಾವರ ಬ್ಲಾಕ ಕಾಂಗ್ರೆಸ್ ಸಮಿತಿ ನಗರದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಹಾತ್ಮಾ ಗಾಂಧೀ ಜಯಂತಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ ಹೀಗೆ ಹಲವಾರು ಚಳುವಳಿ ನಡೆಸಿ, ಪ್ರಪಂಚಕ್ಕೆ ಶಾಂತಿ ಭೋಧಿಸಿದರು.ಆದರೆ ಇಂದು ಶಾಂತಿ ಧೂತ ಮಹಾತ್ಮಾ ಗಾಂಧೀಯವರನ್ನು ಕೊಂದ ನಾಥುರಾಮ್ ಗೋಡ್ಸೆಯಂತವರ ಹೆಸರಿನಲ್ಲಿ ದೇವಸ್ಥಾನಗಳು ಕೂಡ ತಲೆ ಎತ್ತುತ್ತಿರುವುದು ತೀರಾ ಖಂಡನೀಯ ಎಂದು ಜಗದೀಪ ತೆಂಗೇರಿ ವಿಷಾದ ವ್ಯಕ್ತಪಡಿಸಿದರು.
ಕೆ.ಪಿ.ಸಿ.ಸಿ. ಸದಸ್ಯ ಎಂ.ಎನ್.ಸುಬ್ರಮಣ್ಯ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರೀಯವರು ಎಂದು ಅಧಿಕಾರಕ್ಕಾಗಿ ಆಸೆ ಪಟ್ಟಿರಲಿಲ್ಲ. ದೇಶಕ್ಕಾಗಿ ತನು ಮನ ಧನವನ್ನು ಸಮರ್ಪಿಸಿದ್ದರು. ತಂದೆ-ತಾಯಿ ಹೇಳಿದ ನೀತಿ ಪಾಠಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ದೇವ ಸ್ವರೂಪಿ ನಮ್ಮ ಲಾಲ್‌ಬಹದ್ದೂರ್ ಶಾಸ್ತ್ರೀ ಆಗಿದ್ದರು.ಅವರ “ಜೈ ಜವಾನ, ಜೈ ಕಿಸಾನ್” ಅನ್ನೊ ಸಂದೇಶ ಇಂದಿಗೂ ಜನಜನಿತವಾಗಿದ್ದೂ. ಅವರ ತತ್ವ, ಆದರ್ಶಗಳು ಎಂದೆಂದಿಗೂ ಅಜರಾಮರ ಎಂದರು.
ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ್ ಮಾತನಾಡಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧಿಯವರು, ಸ್ವತಂತ್ರ ಭಾರತದಲ್ಲಿ ಮಧ್ಯ ರಾತ್ರಿಯು ಕೂಡಾ ಮಹಿಳೆಯರು ಏಕಾಂಗಿಯಾಗಿ ನಿರ್ಭಿತಿಯಿಂದಾ ಓಡಾಡಿದಾಗಲೇ ಭಾರತಕ್ಕೆ ನಿಜವಾದ ಸ್ವಾತಂತ್ರ ದೊರಕಿದಂತಾಗುತ್ತದೆ ಎಂದಿದ್ದರು ಎಂದು ನುಡಿದರು.
ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ದಾಮೋದರ ನಾಯ್ಕ,ಬ್ಲಾಕ್ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೇಸ್ತ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ , ಜಿಲ್ಲಾ ಕಾಂಗೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ ಮುಂತಾದವರು ಉಪಸ್ಥಿತರಿದ್ದರು.