ಹೊನ್ನಾವರ ಡಿ.ದೇವರಾಜ ಅರಸು ವಿಚಾರ ವೇದಿಕೆ ಉತ್ತರ ಕನ್ನಡ ವತಿಯಿಂದ ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತಾ ಸಿಬ್ಬಂದಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಸೇವೆಯನ್ನು ಪರಿಗಣಿಸಿ ಗೌರವ ಸಮರ್ಪಣೆ ಕಾರ್ಯಕ್ರಮ ಆಸ್ಪತ್ರೆಯಲ್ಲಿ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನಿವೇದಿತ್ ಆಳ್ವಾ ಮಾತನಾಡಿ,ಅರಸುರವರು ಅಭಿವೃದ್ದಿ ಪರವಾಗಿದ್ದವರು. ತಮ್ಮ ತಾಯಿ ಮರ್ಗರೇಟ್ ಆಳ್ವಾರವರು ರಾಜ್ಯಸಭೆಗ ಹೋಗಲು ಅರಸುರವರೆ ಕಾರಣ.ಹಿಂದುಳಿದ ವರ್ಗದವರನ್ನು ಮುನ್ನೆಲೆಗೆ ತರಬೇಕೆನ್ನುವ ವಿಚಾರಧಾರೆ ಹೊಂದಿ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು ಎಂದು ಅರಸರವರ ಕಾರ್ಯವೈಖರಿ ಸ್ಮರಿಸಿದರು. ಇಂದು ಗಾಂಧೀಜಿಯವರ ಕೊಂದ ಗೂಡ್ಸೆಯನ್ನು ವಿಜೃಂಭಿಸುತ್ತಿದ್ದಾರೆ.ಇದು ವಿಪರ್ಯಾಸದ ಸಂಗತಿ,ಇಂತಹದು ನಡೆಯಬಾರದು.ನಾವು ಎಂದಿಗು ಸ್ವಾತಂತ್ರ್ಯ ಹೋರಾಟಗಾರರ ಸೇವೆ ಮರೆಯಬಾರದು ಎಂದರು.ಕರೋನಾ ಸಂದರ್ಭದಲ್ಲಿ ವೈದ್ಯರು,ದಾದಿಯರು,ಸ್ವಚ್ಚತಾಸಿಬ್ಬಂದಿಗಳ ಸೇವೆ ಶ್ಲಾಘನೀಯ.ಅವರ ಸೇವೆಯನ್ನು ಎಲ್ಲರು ಗೌರವಿಸಬೇಕು,ಆ ಕಾರ್ಯ ಅರಸು ವಿಚಾರ ವೇದಿಕೆಯಿಂದ ಆಗಿದೆ ಎಂದು ಸಂಘಟಕರನ್ನು ಅಭಿನಂಧಿಸಿದರು.
ಹಿಂದುಳಿದ ವರ್ಗದವರಿಂದ ಬಂದ ಅರಸುರವರು ಸಾಮಾಜಿಕ ಕ್ರಾಂತಿ ಸೃಷ್ಠಿಸಿದವರು. ಅವರ ಆಶಯ,ಆದರ್ಶ,ನಡೆನುಡಿ ಹೀಗೆ ಮುಂದುವರೆಯಲಿ.ಸ್ವಚ್ಚತೆಯೊಂದಿಗೆ ನಮ್ಮ ಆದರ್ಶಗಳನ್ನು ಬೆಳೆಸಿಕೊಳ್ಳೊಣ ಎಂದು ಸಾಹಿತಿ ಡಾ,ಶ್ರೀಪಾದ ಶೆಟ್ಟಿ ಮಾತನಾಡಿದರು. ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಯವರನ್ನು ಹಿಂಸಾತ್ಮಕವಾಗಿ ಕೊಲ್ಲಲಾಯಿತು. ಇದು ನಮಗೆಲ್ಲಾ ನೋವಿನ ಸಂಗತಿ.ಅಂತಹ ಮಹಾತ್ಮರ ಜಯಂತಿಯಂದು ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನಿಸಿರುವುದು ಅಭಿನಂದನಾ ಕಾರ್ಯ ಎಂದರು.
ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಮಾತನಾಡಿ,ಸಮಾನ ಮನಸ್ಕರು ಸೇರಿ ಅರಸು ವಿಚಾರ ವೇದಿಕೆ ಕಟ್ಟಿಕೊಂಡು ಸಮಾಜದ ಅಂಕುಡೊಂಕು ತಿದ್ದುವಲ್ಲಿ,ಜನಸಾಮಾನ್ಯರಿಗೆ ಅನ್ಯಾಯವಾದಲ್ಲಿ ಅರಸು ವೇದಿಕೆ ಯಾವತ್ತು ತನ್ನ ಸೇವೆ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್ ಕಿಣಿ ಮಾತನಾಡಿ, ಆಸ್ಪತ್ರೆಗೆ ಬರುವ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಆಸ್ಪತ್ರೆಯ ಎರಡನೇ ಮಹಡಿಗೆ ಬರಬೇಕಾಗುತ್ತದೆ. ಇಂತಹ ರೋಗಿಗಳ ಪರಿಸ್ಥಿತಿ ಕಷ್ಟಕರವಾಗಿರುತ್ತದೆ, ಆದ್ದರಿಂದ ಇವರಿಗೆ ಲಿಪ್ಟ್ ಅವಶ್ಯತಕೆ ಇರುತ್ತದೆ. ಈ ಬಗ್ಗೆ ನಿವೇದಿತ್ ಆಳ್ವರವರಲ್ಲಿ ವಿಷಯ ಪ್ರಸ್ತಾಪಿಸಿದಾಗ 15 ಲಕ್ಷ ಮೊತ್ತದ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.ಅವರಿಗೆ ರೋಗಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತಾ ಸಿಬ್ಬಂದಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಡಿ.ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ಸನ್ಮಾನಿಸಿ,ಗೌರವಿಸಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಸತೀಶ್ ನಾಯ್ಕ,ತಾಲೂಕಾಸ್ಪತ್ರೆಯ ವೈದ್ಯರಾದ ಡಾ.ಪ್ರಕಾಶ್ ನಾಯ್ಕ,ಡಾ.ಕೃಷ್ಣಾ.ಜಿ,ಡಾ.ಅನುರಾಧ ಪಟಗಾರ್,ಸಾಹಿತಿ ಎಸ್.ಡಿ ಹೆಗಡೆ,ಶಂಕರ ಗೌಡ ಗುಣವಂತೆ,ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು,ಸ್ವಚ್ಚತಾ ಸಿಬ್ಬಂದಿಗಳು ಹಾಜರಿದ್ದರು.