ಉಳವಿಯಲ್ಲಿ 69 ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ

ಜೋಯಿಡಾ : ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ವನ್ಯಜೀವಿ ಇಲಾಖೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 69 ನೇ ವನ್ಯಜೀವಿ ಸಪ್ತಾಹಕ್ಕೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ ಅವರು ಇಂದು ಸೋಮವಾರ ಚಾಲನೆಯನ್ನು ನೀಡಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಅವರು ವನ್ಯಜೀವಿ ಇಲಾಖೆಯ ವತಿಯಿಂದ ಪ್ರತಿ ವರ್ಷವೂ ವನ್ಯಜೀವಿ ಸಪ್ತಾಹ ನಡೆಸಲಾಗುತ್ತದೆ, ಇದರ ಮುಖ್ಯ ಉದ್ದೇಶ ಅರಣ್ಯ ಮತ್ತು ಕಾಡು ಪ್ರಾಣಿಗಳ ರಕ್ಷಣೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜನಮಾನಸಕ್ಕೆ ಜಾಗೃತಿ‌ಮೂಡಿಸುವುದದಾಗಿದೆ, ದೇಶದಲ್ಲಿ ಅರಣ್ಯ ಸಂಪತ್ತು ಕಡಿಮೆಯಾಗುತ್ತಿದೆ. ಜೋಯಿಡಾ ಭಾಗದಲ್ಲಿ ಉತ್ತಮ ಅರಣ್ಯ ಪ್ರದೇಶವಿದೆ. ಅರಣ್ಯ ಸಂಪತ್ತು ಉಳಿದರೆ ಮುಂದಿನ ಪೀಳಿಗೆ ಉಳಿಯುತ್ತದೆ, ಕಾಡಿದ್ದರೆ ಮಳೆ, ಬೆಳೆ. ಉತ್ತಮವಾದ ಗಾಳಿ ಎಲ್ಲವೂ ದೊರೆಯುತ್ತದೆ. ಸಮತೋಲಿತ ಪರಿಸರ ನಿರ್ಮಾಣಕ್ಕೆ ವನ್ಯಪ್ರಾಣಿಗಳ ಕೊಡುಗೆಯು ಅಪಾರವಾಗಿದೆ ಈ ನಿಟ್ಟಿನಲ್ಲಿ ವನ್ಯಪ್ರಾಣಿಗಳ ಸಂರಕ್ಷಣೆ‌ ಮತ್ತು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಶ್ರೀ.ಕ್ಷೇತ್ರ ಉಳವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರಯ್ಯ ಕಲ್ಮಠ ಅವರಜ ಕಾರ್ಯಕ್ರಮದ ಕುರಿತು ಮಾತನಾಡಿ ನಮ್ಮ ಪೂರ್ವಜರು ಮರಗಿಡಗಳನ್ನು ಪೂಜಿಸುತ್ತಾ ಬಂದವರು. ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆಯವರ ಜವಾಬ್ದಾರಿ ಅಲ್ಲ. ಇದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ ಮತ್ತು ಕಾಡು ಪ್ರಾಣಿ, ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ, ಗುಂದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಪಣಸೋಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ, ಕುಳಗಿ ವಲಯಾರಣ್ಯಾಧಿಕಾರಿ ಮಹಾಂತೇಶ್ ಪಾಟೀಲ್, ಕುಂಬಾರವಾಡಾ ವಲಯ ಅರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್, ಪ್ರಮುಖರಾದ ಗೋಪಾಲ ಭಟ್ಟ , ಜುಬೇರ ಶೇಖ್, ವಿಷ್ಣು ಬಿರಂಗತ್ ,ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.