ಕುಸಿದು ಬಿದ್ದ ಶಾಲಾ ಮೇಲ್ಚಾವಣಿ; ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ಅಂಕೋಲಾ : ಎಡಬಿಡದೆ ಸುರಿಯುತ್ತಿರುವ ಮಳೆಗೆ ಸರಕಾರಿ ಶಾಲೆಯೊಂದರ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಶುಕ್ರವಾರ ಬೆಳ್ಳಂಬೆಳಿಗ್ಗೆ ಬೊಬ್ರುವಾಡ ಗ್ರಾ.ಪಂ. ವ್ಯಾಪ್ತಿಯ ಬೇಳಾಬಂದರ ಶಾಲೆಯ ಮೇಲ್ಛಾವಣಿ ಕುಸಿದಿದೆ.
ಇದು ಸುಮಾರು 74 ವರ್ಷ ಹಳೆಯದಾದ ಶಾಲಾ ಕಟ್ಟಡವಾಗಿದೆ. ಶುಕ್ರವಾರ ತರಗತಿಗಳು ಪ್ರಾರಂಭವಾಗುವ ಮುಂಚೆಯೆ ಈ ಘಟನೆ ಜರುಗಿದ್ದು, ವಿದ್ಯಾರ್ಥಿಗಳು ಅಪಾಯದಿಂದ ಪಾರಾಗುವಂತಾಗಿದೆ. ಒಂದೊಮ್ಮೆ ಅರ್ಧ ಗಂಟೆ ವಿಳಂಬವಾಗಿಯೂ ಈ ಘಟನೆ ನಡೆದಿದ್ದರೆ ಮೇಲ್ಚಾವಣಿ ಕುಸಿದ ತರಗತಿಯಲ್ಲಿ ವಿದ್ಯಾರ್ಥಿಗಳು ಇರುತ್ತಿದ್ದು ಅಪಾಯದ ಸಾಧ್ಯತೆ ಹೆಚ್ಚಾಗಿತ್ತು. ಸಾಮಾಜಿಕ ಕಾರ್ಯಕರ್ತ ಉಮೇಶ ನಾಯ್ಕ ಘಟನೆ ಸಂಭವಿಸಿದ ನಂತರ ತಹಶೀಲ್ದಾರರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಅಶೋಕ ಭಟ್ ಶಾಲಾ ಕಟ್ಟಡವನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕುಳ್ಳಿರಿಸುವಂತೆ ಹೇಳಿ ತುರ್ತಾಗಿ ಮೇಲ್ಛಾವಣಿಗೆ ತಾಡಪತ್ರಿ ಹೊರಿಸುವಂತೆ ಮತ್ತು ಪ್ರಕೃತಿ ವಿಕೋಪದಡಿಯಲ್ಲಿ ದುರಸ್ಥಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಕೂಡಲೇ ಮೇಲ್ಛಾವಣಿಯ ದುರಸ್ಥಿಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುವದಾಗಿ ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಭೇಟಿ ನೀಡಿ ತುರ್ತು ದುರಸ್ಥಿಯ ಕುರಿತು ಮುಖ್ಯಾಧ್ಯಾಪಕ ಗೋವಿಂದ ಆಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ನಾಯ್ಕ, ಗ್ರಾ.ಪಂ. ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.

ಬೊಬ್ರುವಾಡ ಗ್ರಾ.ಪಂ. ಪಿಡಿಓ ನಾಗೇಂದ್ರ ನಾಯ್ಕ ಭೇಟಿ ನೀಡಿ ಮೇಲ್ಛಾವಣಿ ಕುಸಿದ ತರಗತಿಗೆ ಸಂಪೂರ್ಣವಾಗಿ ತಾಡಪತ್ರಿ ಹೊದಿಸುವ ಕುರಿತು ಕ್ರಮ ಕೈಗೊಂಡರು. ಶಿಕ್ಷಣ ಸಂಯೋಜಕ ಬಿ ಎಲ್ ನಾಯ್ಕ ಮಕ್ಕಳ‌ ಸುರಕ್ಷತೆ ಮತ್ತು ದುರಸ್ತಿಯ ಕುರಿತು ಶಾಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಡಿ ನಾಯ್ಕ, ಗ್ರಾ.ಪಂ. ಸದಸ್ಯೆ ಪ್ರಭಾ ನಾಯ್ಕ, ರವಿ ನಾಯ್ಕ ಸ್ಥಳೀಯರಾದ ಸುಜೀತ ನಾಯ್ಕ, ನಾಗೇಂದ್ರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.

ಬೇಳಾಬಂದರಿನ ಸರಕಾರಿ ಶಾಲೆಯು‌ 74 ವರ್ಷ ಹಳೆಯ ಕಟ್ಟಡವಾಗಿದ್ದು ಅನೇಕ ಬಾರಿ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಸರಕಾರದಿಂದ ಇದುವರೆಗೂ ಅನುದಾನ ಬಂದಿಲ್ಲ. ಮುಂದಿನ ವರ್ಷ ಈ ಶಾಲೆಯು 75 ವರ್ಷಗಳನ್ನು ಪೂರೈಸುತ್ತಿದ್ದು ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಹೊಸ ಕಟ್ಟಡ ಮಂಜೂರಿಯಾಗುವುದೇ ಕಾದು ನೋಡಬೇಕಿದೆ. ಸರಕಾರಿ ಇಲಾಖೆಗಳಿಗೆ ಹೊಸ ಕಟ್ಟಡಗಳಿಗೆ ತಕ್ಷಣ ಮಂಜೂರಿ ನೀಡುವ ಸರಕಾರ ದೇಶದ ಭವಿಷ್ಯದ ದೇಗುಲಗಳು ಎಂದೇ ಬಿಂಬಿತವಾಗಿರುವ ಶಾಲಾ ಕಟ್ಟಡಗಳಿಗೆ ಮಂಜೂರಿ ನೀಡಲು ಯಾಕೆ ಮೀನಾಮೇಷ ಎಣಿಸುತ್ತದೆ ಅರ್ಥವಾಗುತ್ತಿಲ್ಲವಾಗಿದೆ.ಸುದ್ದಿ ತಿಳಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಅಶೋಕ ಭಟ್ ಅವರಿಗೆ ಧನ್ಯವಾದಗಳು. ಶಾಲೆಯ ಕಟ್ಟಡ ತೀರ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ, ಪ್ರತೀ ಸಲ ಪ್ರಸ್ತಾವನೆ ಸಲ್ಲಿಸಿದಾಗಲೂ ದುರಸ್ತಿಗಾಗಿ ಮಾತ್ರ ಹಣ ಬರುತ್ತದೆ. ಸರಕಾರದ ಸಂಬಂಧಪಟ್ಟ ಇಲಾಖೆ ಕೂಡಲೆ ಹೊಸ‌ ಕಟ್ಟಡ ನಿರ್ಮಿಸಿಕೊಡುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ನಾಯ್ಕ ಆಗ್ರಹಿಸಿದ್ದಾರೆ.