ಪೊಲೀಸ್ ಇಲಾಖೆಯಲ್ಲಿ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಕೆಲಸ ಮಾಡಬೇಕು-ಅಂಜುಮಾಲಾ ನಾಯಕ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಪಿಎಸೈ ಆಗಿದ್ದ ಈಗ ಸಿಐಡಿ ವಿಭಾಗದಲ್ಲಿ ಡಿವೈಎಸ್‌ಪಿ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಕೋಲಾದ ಶ್ರೀಮತಿ ಅಂಜುಮಾಲಾ ತಿಮ್ಮಣ್ಣ ನಾಯಕ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕಾರ ದೊರೆತಿರುವುದರಿಂದ ಅವರನ್ನು ಅವರ ಸ್ವಗೃಹ ಅಂಕೋಲಾದಲ್ಲಿ ಕರ್ನಾಟಕ ಸಂಘದ ವತಿಯಿಂದ ಸಂಘದ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಗೌರವವನ್ನು ಸ್ವೀಕರಿಸಿದ ಡಿವೈಎಸ್‌ಪಿ ಶ್ರೀಮತಿ ಅಂಜುಮಾಲಾ ನಾಯಕ ಅವರು ನನಗೆ ಕರ್ನಾಟಕ ಸಂಘದ ವತಿಯಿಂದ ಗೌರವ ನೀಡಿರುವುದು ಎಲ್ಲ ಗೌರವಕ್ಕಿಂತಲೂ ಶ್ರೇಷ್ಠವಾದುದ್ದು ಮತ್ತು ಸ್ವಾತಂತ್ರ್ಯ ಹೋರಾಟದ ಪುಣ್ಯಭೂಮಿ ಅಂಕೋಲಾದಲ್ಲಿ ಜನಿಸಿದ ನಾನು ಧನ್ಯಳಾಗಿದ್ದೇನೆ ಮತ್ತು ವಿರೋಚಿತ ಸ್ವಾತಂತ್ರ್ಯ ಹೋರಾಟದ ಕರ್ನಾಟಕ ಬಾರ್ಡೋಲಿಯ ನಾಡಿನ ಮಗಳು ಎಂಬ ಗೌರವ ಸಹ ನನಗೆ ನಮ್ಮ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಸಿಗುತ್ತಿದೆ. ಇದಕ್ಕಿಂತ ದೊಡ್ಡದು ಬೇರೆ ಏನು ಇಲ್ಲ. ಈ ಎಲ್ಲ ಸಾಧನೆಗೆ ನಮ್ಮ ಕುಟುಂಬದ ಪ್ರೋತ್ಸಾಹವೇ ಕಾರಣ ಎಂದರು. ಇಲಾಖೆಯಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಿ ಸಾಧನೆ ಮಾಡಬೇಕೆಂಬ ಕನಸು ಹೊಂದಿದ್ದೇನೆ ಎಂದರು.
ಪೋಲಿಸ್ ಇಲಾಖೆಗೆ ಹೆಣ್ಣು ಮಕ್ಕಳು ನಿರ್ಭಿಡೆಯಿಂದ ಸೇರಬೇಕು. ಪುರುಷರಷ್ಟೇ ಮಹಿಳೆಯರಿಗೂ ಸಹ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಶಕ್ತಿ, ಸಾಮರ್ಥ್ಯ ಮತ್ತು ಬುದ್ದಿವಂತಿಕೆ ಇದ್ದರು ಮಹಿಳೆಯರು ಇಲಾಖೆಗೆ ಸೇರಲು ಮನಸ್ಸು ಮಾಡುತ್ತಿಲ್ಲ. ಕೀಳರಿಮೆ ಬಿಟ್ಟು ಪೋಲಿಸ್ಇ ಲಾಖೆಗೆ ಮಹಿಳೆಯರು ಸೇರಬೇಕು ಎಂದು ಅಂಜುಮಾಲಾ ನಾಯಕ ಹೇಳಿದರು. ಹಿರಿಯ ಸಾಹಿತಿ ವಿಠ್ಠಲ ಗಾಂವಕರ ಅವರು ಮಾತನಾಡಿ, ಶ್ಲಾಘನೆ ಇಲ್ಲದ ವ್ಯಕ್ತಿ ಬೆಳೆಯುವುದಿಲ್ಲ. ಸಾಧನೆಗೆ ತಕ್ಕಂತೆ ಸಾರ್ವಜನಿಕ ವಲಯದಲ್ಲಿ ಗೌರವ, ಪುರಸ್ಕಾರ ದೊರೆತಾಗ ಇನ್ನಷ್ಟು ಸಾಧನೆ ಮಾಡಲು ಹುಮ್ಮಸ್ಸು ದೊರೆಯುತ್ತದೆ. ರಾಷ್ಟ್ರಪ್ರಶಸ್ತಿ ಬಂದಿರುವುದು ಅವರ ಸೇವೆಯ ಸ್ಪಷ್ಟತೆ ಎಷ್ಟೆಂಬುದು ಗೊತ್ತಾಗುತ್ತದೆ ಅವರಿಗೆ ಬಂದ ಈ ಪ್ರಶಸ್ತಿ ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು. ಸಾಹಿತಿ ಶ್ರೀಮತಿ ಹೊನ್ನಮ್ಮ ನಾಯಕ ಮಾತನಾಡಿ, ಆ ಕಾಲದಲ್ಲಿಯೇ ಮಹಿಳಾ ಪಿಎಸೈ ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ ಅಂಜುಮಾಲಾ ಅವರು ಮಹಿಳಾ ಸಮುದಾಯ ಅಭಿಮಾನ ಪಡುವಂತೆ ಮಾಡಿದ್ದಾರೆ. ಕರ್ನಾಟಕ ಸಂಘದ ಈ ಮನ್ನಣೆ ಅತೀ ದೊಡ್ಡದು ಎಂದರು. ನಿವೃತ್ತ ಶಿಕ್ಷಕ ಎಂ.ಎಂ.ಕರ್ಕಿಕರ ಮಾತನಾಡಿ, ಅಂಜುಮಾಲಾ ಅವರನ್ನು ಪೋಲಿಸ್ ಇಲಾಖೆಗೆ ಸೇರುವಂತೆ ಪ್ರೋತ್ಸಾಹಿಸಿದ ತಂದೆ-ತಾಯಿ ಅವರ ಕೊಡುಗೆ ಸಹ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಮಹೇಶ ಬಿ.ನಾಯಕ ಪ್ರಮಖರಾದ ಡಾ. ಅರ್ಚನಾ ನಾಯಕ, ಪ್ರಭಾಕರ ಬಂಟ, ಕೆ.ರಮೇಶ, ಪ್ರೊ. ಶ್ರೀಧರ ನಾಯಕ, ಪ್ರೊ. ಎಸ್.ಆರ್.ನಾಯಕ, ಅಂಜುಮಾಲಾ ಅವರ ಪತಿ ಮಹೇಶ ಜಟಕನಮನೆ, ತಂದೆ ತಿಮ್ಮಣ್ಣ ಬಿ. ನಾಯಕ, ತಾಯಿ ಶ್ರೀಮತಿ ಶಾಂತಿ ಟಿ. ನಾಯಕ, ಸಹೋದರರಾದ ಡಾ. ಸಂಜು ಟಿ. ನಾಯಕ, ಮಂಜುನಾಥ ಟಿ. ನಾಯಕ ಉಪಸ್ಥಿತರಿದ್ದರು.