ಅಂಕೋಲಾ: ಕೃಷಿ ಕಾಯಕಗಳಲ್ಲಿ ಹಾಸುಹೊಕ್ಕಾಗಿರುವ ಜಾನಪದ ಸಾಹಿತ್ಯದಲ್ಲಿ ಅದ್ಭುತವಾದ ಸತ್ವ ಅಡಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಸಾಹಿತ್ಯ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಕೃಷಿಯ ಕುರಿತಾಗಿ ಕೇಳಿ ಬರುವ ಹಾಡುಗಳಲ್ಲಿರುವ ಅಗಾಧವಾದ ಶಕ್ತಿಯು, ಕೃಷಿ ಕಾಯಕದ ಭಾರವನ್ನು ಹಗುರಾಗಿಸಿ ಹುಮ್ಮಸ್ಸು ತುಂಬುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದರು.ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಸಾಹಿತ್ಯಗೋಷ್ಠಿಯಲ್ಲಿ ಪಾಲ್ಗೊಂಡ ಕೃಷಿ ಸಾಧಕರ ಅನುಭವದ ಮಾತುಗಳು ಯುವ ಜನಾಂಗಕ್ಕೆ ಪ್ರೇರಣಾ ಶಕ್ತಿಯಾಗಿದ್ದು, ಹಮ್ಮಿಕೊಂಡಿರುವ ಕಾರ್ಯಕ್ರಮ ಉದ್ದೇಶ ಸಾರ್ಥಕತೆ ಕಂಡಿದೆ ಎಂದರು.ಕೃಷಿ ಗೋಷ್ಠಿಯಲ್ಲಿ ಭಾಗವಹಿಸಿದ ಗಣಪತಿ ಭಟ್ ಕಲ್ಲೆಮನೆ, ಅಂಗಡಿಬೈಲ್ (ತೋಟಗಾರಿಕೆ), ನಾಗರಾಜ ನಾರಾಯಣ ನಾಯ್ಕ, ತೆಂಕಣಕೇರಿ (ಭತ್ತದ ಕೃಷಿ), ಸಂದೇಶ ಸದಾನಂದ ಬಾಂದೇಕರ ಹಿಲ್ಲೂರು (ಜೇನು ಸಾಕಣೆ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ, ಹಿರಿಯ ಪತ್ರಕರ್ತ ವಾಸುದೇವ ಗುನಗಾ ಮಾತನಾಡಿದರು.ಕ.ಸಾ.ಪ. ಖಜಾಂಚಿ ಡಾ. ಎಸ್.ವಿ. ವಸ್ತ್ರದ್ ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಎಂ.ಬಿ. ಆಗೇರ ವಂದಿಸಿದರು. ಲೇಖಕ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿ ಜಿ.ಆರ್. ತಾಂಡೇಲ್, ಪ್ರಮುಖರಾದ ಡಾ. ಪ್ರಕಾಶ ನಾಯಕ, ಜೆ. ಪ್ರೇಮಾನಂದ, ತಿಮ್ಮಣ್ಣ ಭಟ್ಟ, ರಫೀಕ್ ಶೇಕ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



