ದಾಂಡೇಲಿ : ನಗರದ ಜನತಾ ಪ್ರೌಢಶಾಲೆಯ 9 ನೇ ತರಗತಿಯ ಕೆಲ ವಿದ್ಯಾರ್ಥಿನಿಯರು ಕೈಗೆ ಬರೆ ಎಳೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಪಾರಿ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಯಿನಿ ಭಾರತಿ ಗೌಡ ಅವರಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸವಿವರವಾದ ಮಾಹಿತಿಯನ್ನು ಪಡೆದರು. ಆನಂತರ ಶಾಲಾ ಶಿಕ್ಷಕ ವೃಂದದವರ ಜೊತೆ ಸಭೆಯನ್ನು ನಡೆಸಿದರು.
ಶಾಲಾ ಮುಖ್ಯೋಪಾಧ್ಯಾಯನಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ ಶಾಲೆಯ ಶೈಕ್ಷಣಿಕ ಉನ್ನತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಶಿಕ್ಷಕರಾದವರು ಸಮಸ್ಯೆಗಳನ್ನು ಬಗೆಹರಿಸಬೇಕೆ ಹೊರತು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರ ಜೊತೆ ಸಮನ್ವಯತೆಯನ್ನು ಸಾಧಿಸಿ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ, ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಜೇಮ್ಸ್ ಡಿಸೋಜಾ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಜಾಕಿರ್ ಹುಸೇನ್ ಜಂಗುಬಾಯಿ ಉಪಸ್ಥಿತರಿದ್ದರು.