ಹೊನ್ನಾವರ: ಸಾಕ್ಷರತಾ ಕಾರ್ಯಕ್ರಮದಿಂದ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಜ್ಞಾನ ಪಡೆದು ವ್ಯವಹಾರ ಜ್ಞಾನದ ಜೊತೆ ಶೈಕ್ಷಣಿಕ ಕಾಳಜಿ ಹೊಂದಿದ್ದಾರೆ ಎಂದು ತಾಲೂಕಾ ಪಂಚಾಯತ ಇ.ಓ ಸುರೇಶ ನಾಯ್ಕ ಸಂತಸ ವ್ಯಕ್ತಪಡಿಸಿದರು.
ಪ್ರಭಾತನಗರದ ಪ್ರೌಡಶಾಲೆಯಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಶಿಕ್ಷಣ ಸೇರಿದಂತೆ ವಿವಿಧ ರಂಗದ ಸಾಧನೆಯಲ್ಲಿ ಹೊನ್ನಾವರ ಪ್ರಥಮ ಸ್ಥಾನದಲ್ಲಿರಲು ಪೋಷಕರ ಪಾತ್ರವು ಇದೆ. ಮಾತೆಯರು ಸುಶಿಕ್ಷತರಾಗಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಅದರ ಹೊರತಾಗಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಜ್ಞಾನ ಮೂಡಿಸಲು ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಕಾರದಿಂದ ಸಾಧನೆಯು ಉತ್ತಮವಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ,ಸಾಕ್ಷರತಾ ಮೇಲ್ವಿಚಾರಕರಾದ ಎಸ್.ಎಮ್.ಹೆಗಡೆ ಮಾತನಾಡಿ ಕೇವಲ ಸಹಿ ಮಾಡುವುದನ್ನು ಮಾತ್ರ ಕಲಿಸದೇ, ವ್ಯವಹಾರ ಜ್ಞಾನದ ಜೊತೆಗೆ, ಓದಲು ಬರೆಯುದನ್ನು ಕಲಿಸುವ ಮೂಲಕ ಸಾಕ್ಷರತಾ ಪ್ರಮಾಣಪತ್ರ ನೀಡುತ್ತಿದ್ದೇವೆ. ಒಮ್ಮೆ ಅಧ್ಯಯನದ ಮೂಲಕ ಸಾಕ್ಷರತೆ ಹೊಂದಿದವರು, ತಮ್ಮ ಕಲಿಕೆ ಹಾಗೂ ಓದುವ ಪ್ರವೃತ್ತಿಯನ್ನು ಮುಂದುವರೆಸುವಂತೆ ಸಲಹೆ ನೀಡಿದರು.
ಸಾಕ್ಷರತೆ ಪಡೆದ ಪ್ರತಿಯೊರ್ವರಿಗೂ ಪ್ರಮಾಣಪತ್ರ ಹಾಗೂ ನೋಟಬುಕ್ ವಿತರಿಸಲಾಯಿತು. ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎನ್ನುವಂತೆ ಇಂದು ಗ್ರಾಮೀಣ ಭಾಗದ ಅನೇಕರು ಸರ್ಕಾರದ ಸಾಕ್ಷರತಾ ಯೋಜನೆಯ ಮೂಲಕ ಓದಲು ಬರೆಯಲು ಕಲಿತಿದ್ದಾರೆ. ಅವರ ಕಲಿಯುವಿಕೆಗೆ ನಮ್ಮ ಬೋಧಕರ ಪಾತ್ರ ಪ್ರಮುಖವಾಗಿದೆ ಎಂದು ಸಾಕ್ಷರತಾ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಕ್ಷರತಾ ತಾಲೂಕ ಸಂಯೋಜಕರಾದ ಸಾಧನಾ ಬರ್ಗಿ ಪ್ರಾಸ್ತವಿಕವಾಗಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸಾಕ್ಷರತಾ ಪ್ರಮಾಣ ಪತ್ರ ಪಡೆದವರು ತಮ್ಮ ಅನಿಸಿಕೆ ಹಂಚಿಕೊಂಡರು.ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಗೌರವಧ್ಯಕ್ಷ ಸುಧೀಶ ನಾಯ್ಕ ಬಿ.ಆರ್.ಸಿ ಸೀಮಾ, ದೀಪಾ ಶೆಟ್ಟಿ, ಪ್ರಭಾರಿ ಮುಖ್ಯಾಧ್ಯಾಪಕರಾದ ದೇವರಾಜ ಹೆಗಡೆಕಟ್ಟೆ ಉಪಸ್ಥಿತರಿದ್ದರು