ಶಾಂತಿಯುತವಾಗಿ ಚೌತಿ ಮತ್ತು ಈದ್ ಮಿಲಾದ್ ಆಚರಣೆಗೆ ಡಿವೈಎಸ್ಪಿ ಶಿವಾನಂದ ಕಟಗಿ ಕರೆ

ದಾಂಡೇಲಿ : ಹಿಂದೂ ಧರ್ಮಿಯರ ಮತ್ತು ಮುಸ್ಲಿಂ ಧರ್ಮಿಯರ ಪವಿತ್ರ ಹಬ್ಬಗಳಾದ ಚೌತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಯನ್ನು ಮೆರೆಯುವ ಮೂಲಕ ಸರಕಾರದ ನಿಯಮಾವಳಿಯನ್ನು ಪಾಲಿಸುವಂತೆ ದಾಂಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಕಟಗಿ ಅವರು ಕರೆ ನೀಡಿದರು.

ಅವರು ದಾಂಡೇಲಿ ನಗರದ ಡಿಲೆಕ್ಸ್ ಸಭಾಭವನದಲ್ಲಿ ಸಾರ್ವಜನಿಕ ಗಣೇಶ ಮಂಡಲಗಳ ಹಾಗೂ ಈದ್ ಮಿಲಾದ್ ಆಚರಣೆ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಾರ್ವಜನಿಕ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ. ಸಾರ್ವಜನಿಕ ಗಣೇಶ ಮಂಡಳಗಳು ಸರಕಾರದ ನಿಯಮಾವಳಿಯಂತೆ ಗಣೇಶ ಪೆಂಡಾಲ್ ಗಳ ನಿರ್ಮಾಣ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಪರವಾನಿಗೆಯನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶವನ್ನು ನೀಡದೆ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿಕೊಳ್ಳಬೇಕು. ಶಾಂತಿ ಕದಡುವ ಘಟನೆಗಳು ನಡೆಯುವಂತಹ ಸಂದರ್ಭದಲ್ಲಿ ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕು. ಸರಕಾರ ನಿಗದಿಪಡಿಸಿದ ನಿಯಮಾವಳಿಯನ್ನು ಸಾರ್ವಜನಿಕ ಗಣೇಶ ಮಂಡಳಗಳು ಹಾಗೂ ಈದ್ ಮಿಲಾದ್ ಆಚರಣೆ ಸಮಿತಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು. ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿ ಮತ್ತು ಘನತೆಯನ್ನು ಎತ್ತಿ ಹಿಡಿಯಬೇಕೆಂದು ಇದೇ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ.ಎಂ.ಸೂರಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ, ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ, ಪಿಎಸ್ಐ ಐ.ಆರ್ ಗಡ್ಡೇಕರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಗಣೇಶ ಮಂಡಳಗಳ ಪದಾಧಿಕಾರಿಗಳು ಮತ್ತು ಈದ್ ಮಿಲಾದ್ ಆಚರಣೆ ಸಮಿತಿಯ ಪದಾಧಿಕಾರಿಗಳು ಮಾತನಾಡಿ ದಾಂಡೇಲಿ ಶಾಂತಿ ಸೌಹಾರ್ದತೆಯ ನಗರವಾಗಿದ್ದು, ಇಲ್ಲಿ ಎಲ್ಲ ಧರ್ಮಿಯರು ಎಲ್ಲ ಹಬ್ಬ ಹರಿದಿನಗಳನ್ನು ಪರಸ್ಪರ ಸೌಹಾರ್ದತೆಯಿಂದ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ದಾಂಡೇಲಿಯಲ್ಲಿ ಚೌತಿ ಅತೀ ವಿಶೇಷವಾದ ಹಬ್ಬವಾಗಿದೆ. ಇಲ್ಲಿ ಈ ವರ್ಷವೂ ಎಂದಿನಂತೆ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿಯನ್ನು ನೀಡಬೇಕೆಂದು ಮುಸ್ಲಿಂ ಮುಖಂಡರು ಸಹಿತ ಹಿಂದೂ ಮುಖಂಡರು ಮನವಿಯನ್ನು ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜನಸ್ನೇಹಿ ಅಧಿಕಾರಿಯಾಗಿದ್ದು, ದಾಂಡೇಲಿ ಜನತೆಯ ಮನವಿಗೆ ಸ್ಪಂದನೆಯನ್ನು ನೀಡಿ, ಈ ಬಾರಿಯೂ ಡಿಜೆ ಬಳಕೆಗೆ ಮೌಖಿಕವಾಗಿ ಒಪ್ಪಿಗೆಯನ್ನು ನೀಡುವ ಭರವಸೆ ಇದ್ದು, ದಾಂಡೇಲಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಸಹಕರಿಸುವಂತೆ ಮನವಿಯನ್ನು ಮಾಡಿದರು.

ಪಿಎಸ್ಐಗಳಾದ ಯಲ್ಲಪ್ಪ.ಎಸ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕೃಷ್ಣ ಗೌಡ ವಂದಿಸಿದರು.