ಬರೆದಂತೆ ಬದುಕಿದ ಬಹುಮುಖ ವ್ಯಕ್ತಿತ್ವದ ದಿನಕರ ದೇಸಾಯಿ

ಅಂಕೋಲಾ : ಚುಟುಕು ಬ್ರಹ್ಮ ಅಕ್ಷರ ಸೂರ್ಯ ಎನಿಸಿಕೊಂಡ ದಿನಕರ ದೇಸಾಯಿ ಅವರದು ಬಹುಮುಖ ವ್ಯಕ್ತಿತ್ವ. ದೇಸಾಯಿಯವರು ನಿಸ್ವಾರ್ಥ ಸಮಾಜ ಸೇವಕ, ಅಪ್ರತಿಮ ಸಂಘಟನಾ ಚತುರ, ಶಿಕ್ಷಣ ತಜ್ಞ, ಪ್ರಾಮಾಣಿಕ ರಾಜಕಾರಣಿ, ಧ್ಯೇಯನಿಷ್ಠ ಪತ್ರಿಕೋದ್ಯಮಿ, ದೀನದಲಿತರ ಬಂಧುಗಳಾಗಿದ್ದರು. ಬರೆದಂತೆ ಬದುಕಿದ ಮಹಾನುಭಾವ ದಿನಕರ ದೇಸಾಯಿ ಪ್ರಾತಃಸ್ಮರಣೀಯರು ಎಂದು ಜಿ.ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಭಾಕರ ನಾಯಕ ಹೇಳಿದರು. ಅವರು ಅಂಕೋಲಾ ಲಾಯನ್ಸ್ ಕ್ಲಬ್ ಕರಾವಳಿ ಮತ್ತು ಪಿ.ಎಂ. ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ದಿನಕರ ದೇಸಾಯಿಯವರ 114ನೇ ಜನ್ಮದಿನದ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ “ದಿನಕರ ದೇಸಾಯಿ; ಬದುಕು ಬರಹ” ವಿಷಯ ಕುರಿತು ಉಪನ್ಯಾಸ ನೀಡಿದರು.ಗಂಗಾಬಾಯಿ ತೊರ್ಕೆ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾಲ್ಗುಣ ಗೌಡ ವಹಿಸಿದ್ದರು. ದೇಸಾಯಿಯವರು ಮದುವೆಗೆ ಕೇವಲ 13 ರೂ. ವೆಚ್ಚ ಮಾಡಿದ್ದು, ಮೇಣದಬತ್ತಿಯ ಬಗ್ಗೆ ಅವರ ಆಸಕ್ತಿ, ಲೋಕಸಭಾ ಸದಸ್ಯರಾದರೂ ಬ್ಯಾಂಕ್ ಖಾತೆಯನ್ನು ಹೊಂದದಿರುವ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡರು.
ಡಾ. ವಿ.ಎನ್. ನಾಯಕ, ದೇಸಾಯಿ ಚರಿತ್ರೆಯಲ್ಲಿ ಸದಾ ಶಾಶ್ವತವಾಗಿ ಉಳಿಯುವ ಸಾಧನೆ ಮಾಡಿದ್ದಾರೆಂದರು. ದಿನಕರರ ಬದುಕು ಯುವಜನರಿಗೆ ಆದರ್ಶವಾಗಬೇಕೆಂದು ಲಯನ್ಸ್ ಅಧ್ಯಕ್ಷ ಮಂಜುನಾಥ ಹರಿಕಂತ್ರ ಅಭಿಪ್ರಾಯಪಟ್ಟರು. ರಮ್ಯಾ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೇವಾನಂದ ಗಾಂವಕರ ಸ್ವಾಗತಿಸಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಅತಿಥಿಗಳನ್ನು ಪರಿಚಯಿಸಿದರು. ಲಯನ್ಸಿನ ಹಿರಿಯ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀನಿವಾಸ ಯು.ಕೆ. ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಸಾಯಿಯವರ ಭಾವಗೀತೆ, ಚುಟುಕುಗಳನ್ನು ವಾಚಿಸಿದರು. ಲಯನ್ಸ್ ಸದಸ್ಯರಾದ ಎಸ್.ಆರ್. ಉಡುಪಿ, ಸಂಜಯ ಅರುಂಧೇಕರ, ಗಣಪತಿ ನಾಯಕ, ಸದಾನಂದ ಶೆಟ್ಟಿ, ಶಂಕರ ಹುಲಸ್ವಾರ, ಸತೀಶ ನಾಯ್ಕ, ಸುಧೀರ ನಾಯ್ಕ, ಉಪನ್ಯಾಸಕರಾದ ಕೆ. ರಮಾನಂದ ನಾಯಕ, ರಮೇಶ ಗೌಡ, ರೇಷ್ಮಾ ನಾಯಕ ಇತರರು ಉಪಸ್ಥಿತರಿದ್ದರು.