ಡಾ.ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಪ್ರಗತಿಯ ಹರಿಕಾರ : ಎಂ.ಎಸ್.ಇಟಗಿ

ದಾಂಡೇಲಿ : ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ದ್ರುವತಾರೆಯಾಗಿದ್ದ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಪ್ರಗತಿಯ ಹರಿಕಾರರಾಗಿದ್ದಾರೆ. ಡಾ.ದಿನಕರ ದೇಸಾಯಿಯವರು ಸಾಹಿತ್ಯ, ಹೋರಾಟ, ಕಾರ್ಮಿಕ, ರೈತ ಪರ ಚಳುವಳಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರಲ್ಲದೇ, ಪತ್ರಕರ್ತರಾಗಿ, ರಾಜಕಾರಣಿಯಾಗಿಯೂ ನಾಡಸೇವೆಯನ್ನು ಮಾಡಿದ್ದರು. ಚುಟುಕುಗಳ ಸರದಾರರಾಗಿ, ಚುಟುಕು ಬ್ರಹ್ಮನಾಗಿರುವ ಡಾ.ದಿನಕರ ದೇಸಾಯಿಯವರ ಪ್ರಾಂಜಲ ಗುಣಮನಸ್ಸಿನ ಸೇವಾ ಕೈಂಕರ್ಯ ಮತ್ತು ಶಿಕ್ಷಣ ಕ್ರಾಂತಿ ಸದಾ ಸ್ಮರಣೀಯ ಎಂದು ನಗರದ ಜನತಾ ಸಂಯುಕ್ತ ಪದವಿಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಸ್.ಇಟಗಿಯವರು ಹೇಳಿದರು.

ಅವರು ಭಾನುವಾರ ನಗರದ ಜನತಾ ವಿದ್ಯಾಲಯದ ಆವರಣದಲ್ಲಿರುವ ಡಾ.ದಿನಕರ ದೇಸಾಯಿಯವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ವಂದನೆಯನ್ನು ಸಲ್ಲಿಸಿ ಮಾತನಾಡುತ್ತಿದ್ದರು. ಜನತಾ ವಿದ್ಯಾಲಯ ಎಂಬ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಕೀರ್ತಿ ದಿನಕರ ದೇಸಾಯಿಯವರಿಗೆ ಸಲ್ಲಬೇಕೆಂದು ಹೇಳಿ ಅವರ ಆದರ್ಶ ವ್ಯಕ್ತಿತ್ವ ಸದಾ ಅನುಕರಣೀಯ ಮತ್ತು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಜನತಾ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ಉಪನ್ಯಾಸಕ ವೃಂದ, ಜನತಾ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಸಂಸ್ಥೆಯ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ದಿನಕರ ದೇಸಾಯಿಯವರ ಪುತ್ಥಳಿಗೆ ಗೌರವ ವಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದಿನಕರ ದೇಸಾಯಿಯವರ ಚುಟುಕುಗಳನ್ನು ವಾಚಿಸಲಾಯ್ತು.