ಜೋಯಿಡಾ : ತಾಲ್ಲೂಕಿನಲ್ಲಿ ಶೇ: 94% ರಷ್ಟು ಜನರು ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದು, ಈ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಭತ್ತದ ಕೃಷಿ ನೀರಿಲ್ಲದೆ ಸಂಪೂರ್ಣ ಒಣಗಿ ಹೋಗುತ್ತಿದೆ. ಬರಗಾಲ ಬಂದ ಹಿನ್ನೆಲೆಯಲ್ಲಿ ತಾಲೂಕಿನ ರೈತ ಬಾಂಧವರು ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜೋಡ ತಾಲೂಕನ್ನು ಬರಗಾಲ ಪೀಡಿತ ತಾಲೂಕ್ ಎಂದು ಘೋಷಿಸಬೇಕೆಂದು ಜೋಯಿಡಾ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಇಂದು ಶುಕ್ರವಾರ ಜೋಯಿಡಾದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ರಾಜೇಶ್ ಚೌವ್ಹಾಣ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ತಹಸಿಲ್ದಾರರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ವಿಸ್ತಾರದಲ್ಲಿಯೇ ಎರಡನೇ ಅತಿ ದೊಡ್ಡ ತಾಲೂಕಾಗಿದೆ. ಶೇಕಡ 94 ರಷ್ಟು ಜನರು ಕೃಷಿಯನ್ನೇ ನಂಬಿ ತಮ್ಮ ಜೀವನವನ್ನು ನಡೆಸುತ್ತಾ ಬಂದಿರುತ್ತಾರೆ. ಅದರಲ್ಲಿಯೂ ಭತ್ತದ ಬೆಳೆಯನ್ನೇ ನಂಬಿದ್ದು ಮತ್ತು ಇದು ಅವರ ಆಹಾರ ಬೆಳೆಯು ಆಗಿರುವುದರ ಜೊತೆಗೆ ಮಳೆ ಆಶ್ರಿತ ಬೆಳೆಯಾಗಿದೆ. ಆದರೆ ಈ ವರ್ಷ ಮಳೆಯೂ ಸಮರ್ಪಕವಾಗಿ ಬೀಳದಿರುವುದರಿಂದ ಅಲ್ಪ ಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರಿಗೆ ಇದೀಗ ನಾಟಿ ಮಾಡಲು ನೀರಿಲ್ಲದೆ ಪರದಾಡುವಂತಾಗಿದೆ. ನಾಟಿ ಮಾಡಿದವರ ಭತ್ತದ ಪೈರು ನೀರಿಲ್ಲದೆ ಸಂಪೂರ್ಣವಾಗಿ ಬಿಸಿಲಿಗೆ ಒಣಗುತ್ತಿದೆ. ಪರಿಣಾಮವಾಗಿ ತಾಲೂಕಿನ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜೀವನ ನಿರ್ವಹಣೆಯೆ ಕಷ್ಟವಾಗಿದೆ.
ಈ ನಿಟ್ಟಿನಲ್ಲಿ ಜೋಯಿಡಾ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಹಾಗೂ ರದ್ದುಪಡಿಸಿರುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಪುನ: ಜಾರಿಗೊಳಿಸಬೇಕೆಂದು ಮತ್ತು ರೈತರ ಕೃಷಿ ಪಂಪ್ ಸೆಟ್ ಗಳಿಗೆ ದಿನದ 24 ಗಂಟೆಯೂ ಕೂಡ ನಿರಂತರ ವಿದ್ಯುತ್ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜೋಯಿಡಾ ಬಿಜೆಪಿ ತಾಲೂಕು ಅಧ್ಯಕ್ಷರಾದ ಸಂತೋಷ್ ರೆಡ್ಕರ್, ಪ್ರಧಾನ ಕಾರ್ಯದರ್ಶಿ ಸುಭಾಷ್ ಪ್ರತಿನಿಧಿಗಳು, ಪಕ್ಷದ ಪ್ರಮುಖರುಗಳಾದ ಸುಬ್ರಾಯ ಹೆಗಡೆ, ಅರುಣ್ ಕಾಮ್ರೇಕರ್, ಗಿರೀಶ್ ನಾಯ್ಕ, ಸಿದ್ದು ಜೊಕೇರಿ, ಶಮೀರ್ ತವಡ್ಕರ್, ಬಬಲ್ ಕುಶಾಲ್ ಕರ್, ದಯಾನಂದ ದೇಸಾಯಿ,ಮ ಹಾಗೂ ಪಕ್ಷದ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಮೋರ್ಚಾ ಮತ್ತು ಬೂತ್ ಅಧ್ಯಕ್ಷರು ಕಾರ್ಯಕರ್ತರು ಉಪಸ್ಥಿತರಿದ್ದರು.