ಹೊನ್ನಾವರ:ಉದಯ ನಿಧಿ ಸ್ಟಾಲಿನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಹೊನ್ನಾವರ: ಸನಾತನ ಧರ್ಮದ ವಿರುದ್ದ ಮಾತನಾಡಿದ ತಮಿಳು ನಾಡಿನ ಡಿ.ಎಮ್.ಕೆ ಪಕ್ಷದ ಉದಯನಿಧಿ ಸ್ಟಾಲಿನ್, ವಿರುದ್ದ ಕಾನೂನು ಕ್ರಮ ಜರುಗಿಸಲು ಎನ್.ಐ.ಎ ಮೂಲಕ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಎಚ್.ಆರ್.ಗಣೇಶ, ಹೊಸಾಕುಳಿ ಹೊನ್ನಾವರ ಪೋಲಿಸ್ ಸಬ್ ಇನಸ್ಪೆಕ್ಟರ್‌ರವರಿಗೆ ಮನವಿ ಸಲ್ಲಿಸಿದ್ದಾರೆ.
ಪಿಎಸ್ಐ ಸಾವಿತ್ರಿ ನಾಯ್ಕ ಮನವಿ ಸ್ವೀಕರಿಸಿದರು.
ಈ ಸಮಯದಲ್ಲಿ ಸಹಕಾರಿ ಧುರೀಣ ವಿ.ಎನ್ ಭಟ್ ಅಳ್ಳಂಕಿ, ವಕೀಲರಾದ ಎಂ.ಎಸ್ ಭಟ್ಟ, ದಿನೇಶ್ ಹೆಗಡೆ, ವಿ.ಟಿ.ಯಾಜಿ ಮುಖಂಡರಾದ ಅಜಿತ್ ನಾಯ್ಕ, ಗಣಪತಿ ಹಳದಿಪುರ ಅರುಣ್ ಕುಮಾರ್ ಹಬ್ಬು, ಹಾಗೂ ಶ್ರೀಧರ್ ಜಲವಳ್ಳಿ ಉಪಸ್ಥಿತರಿದ್ದರು.
ಅವರು ತಾವು ನೀಡಿದ ಮನವಿಯಲ್ಲಿ ತಾನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಂಘದ ಕಾರ್ಯದರ್ಶಿಯಾಗಿದ್ದು, ಸನಾತನ ಹಿಂದೂ ಧರ್ಮದ ಅನುಯಾಯಿ ಆಗಿರುತ್ತೇನೆ. ಸನಾತನ ಧರ್ಮದ ಬಗ್ಗೆ ಸಂಚು ಪಿತುರಿ ಹಾಗೂ ಷಡ್ಯಂತರಗಳು ನಡೆಯುತ್ತಾ ಬಂದಿದ್ದು ಆತಂಕಕಾರಿ ಸಂಗತಿಯಾಗಿದೆ. ಚೆನೈನಲ್ಲಿ ಪ್ರಗತಿಪರ ಬರಹಗಾರ ಸಂಘಟನೆ ಏರ್ಪಡಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಭೆಯಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಒಂದು ಧರ್ಮದ ಜನಾಂಗವನ್ನು ಗುರಿಯಾಗಿಸಿಕೊಂಡು ವಿದ್ವಾಂಸಕ ಮತ್ತು ಸಮಾಜ ಘಾತುಕ ಶಕ್ತಿಗಳನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ.
ಸನಾತನ ಧರ್ಮ ನಿರ್ಮೂಲನೆ ಆಗಬೇಕು ಅದು ಒಂದು ಸೊಳ್ಳೆ ಮಲೇರಿಯಾ, ಡೆಂಗ್ಯೂ ಕೊರೊನಾದಂತೆ ಎಂಬ ಹೇಳಿಕೆ ನೀಡಿದ್ದಾರೆ. ಅದರಿಂದ ಸನಾತನ ಧರ್ಮಕ್ಕೆ ಅವಮಾನವಾಗಿದೆ. ಅವರ ಹೇಳಿಕೆಯನ್ನು ಕಾಂಗ್ರೇಸ್ ಪಕ್ಷದ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಮಹಾದೇವಪ್ಪ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇದು ವ್ಯವಸ್ಥಿತ ಉದ್ದೇಶಿತ ಕಳವಳಕಾರಿ ನರಮೇಧದ ಸುಳಿವಾಗಿದೆ.
ಮಣಿಪುರದಲ್ಲಿ ಆದಂತ ಘಟನೆ ರೀತಿಯ ಸಂಚು ಇದಾಗಿರುತ್ತದೆ. ಮುಂದಿನ ಮತಾಂತರ ಮತ್ತು ನರಮೇಧದ ಸ್ಪಷ್ಟ ಸಂದೇಶ ಇದಾಗಿದೆ. ಆದ್ದರಿಂದ ಉದಯನಿಧಿ ಸ್ಟಾಲಿನ್, ಪ್ರಗತಿಪರ ಬರಹಗಾರರ ಒಕ್ಕೂಟದ ಸದಸ್ಯರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ದುಷ್ಟಕೂಟದ ಸದಸ್ಯರನ್ನು ಕೂಡಲೆ ಖಂಡಿಸಿ ಆಗಬಹುದಾದ ನರಮೇಧ ತಪ್ಪಿಸಿ ತನಗೂ ತನ್ನ ಕುಟುಂಬಕ್ಕೂ ರಕ್ಷಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಪಿ.ಎಸ್. ಐ ಸಾವಿತ್ರಿ ನಾಯ್ಕ ಅವಶ್ಯಕ ಕಾನೂನು ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸೂಚಿಸಿದರು.