ಯಲ್ಲಾಪುರ: ಯಲ್ಲಾಪುರ ತಾಲೂಕಿನ ಆನಗೋಡ ಸಮೀಪದ ಗೋಳಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಶ್ರೀಧರ ಮಡಿವಾಳ ಅವರು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಶ್ರೀಧರ ಮಡಿವಾಳ ಅವರು ಶಿಕ್ಷಕ ವೃತ್ತಿಯಲ್ಲಿ 25 ವರ್ಷ ಪೂರೈಸಿದ, ರಜತ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಪ್ರಶಸ್ತಿಯೂ ಬಂದಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ.
ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಶ್ರೀಧರ ಮಡಿವಾಳ, ಈವರೆಗೆ ಹೆಚ್ಚಿನ ಸೇವೆಯನ್ನು ಯಲ್ಲಾಪುರ ತಾಲೂಕಿನಲ್ಲೇ ಸಲ್ಲಿಸಿದ್ದಾರೆ. ಮುಂಡಗೋಡ ತಾಲೂಕಿನ ಕಲ್ಕಿಕೇರಿ ಶಾಲೆಯಲ್ಲಿ 1997 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. 9 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ನಂತರ ಯಲ್ಲಾಪುರ ತಾಲೂಕಿಗೆ ವರ್ಗಾವಣೆಗೊಂಡರು. ಯಲ್ಲಾಪುರದ ಬೈಲಂದೂರು, ಜೋಗಿಕೊಪ್ಪ, ಕಿರವತ್ತಿಗಳಲ್ಲಿ ಶಿಕ್ಷಕರಾಗಿ, ಕಿರವತ್ತಿಯ ಸಿ.ಆರ್.ಪಿ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ 7 ವರ್ಷಗಳಿಂದ ಗೋಳಿಗದ್ದೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತ, ಮಕ್ಕಳ, ಪಾಲಕರ ಮೆಚ್ಚಿನ ಶಿಕ್ಷಕರೆನಿಸಿದ್ದಾರೆ.
ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಲಿಸುತ್ತ, ಶಾಲಾ ಆವಾರದಲ್ಲಿ ಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಬೆಳೆಸುತ್ತ, ಪಾಲಕರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತ, ಶಿಕ್ಷಕರನ್ನೂ ಗೌರವದಿಂದ ಕಾಣುವ ವಿಶೇಷ ಗುಣ ಮಡಿವಾಳ ಅವರನ್ನು ಆದರ್ಶ ಶಿಕ್ಷಕರನ್ನಾಗಿಸಿದೆ. ಗೋಳಿಗದ್ದೆ ಶಾಲೆಯ ಆವಾರವನ್ನು ಹಸಿರುಮಯವಾಗಿಸಿದ್ದಾರೆ, ಚಿಟ್ಟೆ ಪಾರ್ಕ್ ನಿರ್ಮಿಸಿದ್ದಾರೆ.
ಶಾಲೆ ಬಿಟ್ಟ 200 ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸಿ, ಅವರಲ್ಲಿ ಶಿಕ್ಷಣದ ಆಸಕ್ತಿ ಹುಟ್ಟಿಸಿ ವಿದ್ಯಾವಂತರಾಗಿಸಿದ ಹೆಗ್ಗಳಿಕೆ ಶ್ರೀಧರ ಮಡಿವಾಳ ಅವರದು. ಅವರಲ್ಲಿ ಅನೇಕರು ಇಂದು ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ಹೆಮ್ಮೆ ಬೇರಾವುದೂ ಇಲ್ಲ ಎಂದು ಅಭಿಮಾನದಿಂದ ಹೇಳುತ್ತಾರೆ.
ಪಾಲಕರ, ಎಸ್.ಡಿ.ಎಂ.ಸಿಯವರ ಸಹಕಾರ, ಇಲಾಖೆಯ ಅಧಿಕಾರಿಗಳು, ಸಹ ಶಿಕ್ಷಕರ ಪ್ರೋತ್ಸಾಹ, ಮಕ್ಕಳಲ್ಲಿ ಶಿಕ್ಷಣ ಕುರಿತು ಆಸಲ್ತಿ ಇದ್ದರೆ ಮಾತ್ರ ಶಾಲೆ ಅಭಿವೃದ್ಧಿಗೊಳ್ಳಲು ಸಾಧ್ಯ, ಶಿಕ್ಷಕ ಇನ್ನಷ್ಟು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಲು ಸಾಧ್ಯ. ನನ್ನ ಶಾಲೆಯಲ್ಲಿ ಇದೆಲ್ಲವೂ ದೊರೆತಿದೆ. ಈ ಪ್ರಶಸ್ತಿಯ ಗೌರವವೂ ಅವರಿಗೆ ಸಲ್ಲಬೇಕು ಎಂದು ಶ್ರೀಧರ ಮಡಿವಾಳ ಭಾವುಕರಾಗುತ್ತಾರೆ.