ಯಲ್ಲಾಪುರ: ಸಬಗೇರಿ ಬಳಿ ಉರ್ದು ಶಾಲೆಯ ಬಳಿಯ ರಸ್ತೆ ಪಕ್ಕದ ಗಟಾರದಲ್ಲಿ ಕೊಳಚೆ ನೀರು ತುಂಬಿ ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ

ಯಲ್ಲಾಪುರ: ಪಟ್ಟಣದ ಸಬಗೇರಿ ಬಳಿ ಉರ್ದು ಶಾಲೆಯ ಬಳಿಯ ರಸ್ತೆ ಪಕ್ಕದ ಗಟಾರದಲ್ಲಿ ಕೊಳಚೆ ನೀರು ತುಂಬಿ ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ನ್ಯಾಯಾಲಯ, ಕಾಳಮ್ಮನಗರಕ್ಕೆ ತೆರಳುವ ಕಾಂಕ್ರೀಟ್ ರಸ್ತೆ ಪಕ್ಕ ಗಟಾರದಲ್ಲಿ ಕೊಳಚೆ ನೀರಿ ತುಂಬಿ, ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿಯಿದೆ. ಸಮೀಪದಲ್ಲೇ ಉರ್ದು ಶಾಲೆ, ಸಬಗೇರಿ ಪ್ರಾಥಮಿಕ ಶಾಲೆಗಳಿದ್ದು, ನಿತ್ಯ ನೂರಾರು ಮಕ್ಕಳು ಬರುತ್ತಾರೆ. ಸಾರ್ವಜನಿಕರು, ಸುತ್ತಮುತ್ತಲಿನ ನಿವಾಸಿಗಳೂ ಗಟಾರದ ದುರ್ವಾಸನೆಯಿಂದ ಬೇಸತ್ತು ಹೋಗುವಂತಾಗಿದೆ.
ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸ್ಥಳೀಯರು ದೂರಿದ್ದು, ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಈ ಅವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗ ಹರಡಿದಲ್ಲಿ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.