ಮುಂಡಗೋಡ: ಮೈಮೇಲೆ ಬಿಸಿ ಸಾಂಬಾರ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಾಲಾ ಅಡುಗೆ ಸಹಾಯಕಿ ಚಿಕಿತ್ಸೆ ಫಲಕಾರಿ ಆಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅನ್ನಪೂರ್ಣ ಹುಳ್ಯಾಳ (49) ಮೃತಪಟ್ಟ ಶಾಲಾ ಅಡುಗೆ ಸಹಾಯಕಿ. ಆಗಸ್ಟ್ 19 ರಂದು ಮುಂಡಗೋಡ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅನ್ನಪೂರ್ಣ ಅವರು ಮಧ್ಯಾಹ್ನದ ಬಿಸಿ ಊಟ ತಯಾರಿ ಮಾಡಿದ್ದರು. ಬಿಸಿ ಸಾಂಬಾರ್ ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣ ಕಾಲು ಜಾರಿ ಸಾಂಬಾರ್ ಮೈಮೇಲೆ ಬಿದ್ದು ದೇಹವು 50% ಭಾಗ ಸುಟ್ಟು ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅನ್ನಪೂರ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಶುಕ್ರವಾರ ಮೃತಪಟ್ಟಿದ್ದಾರೆ.