ಹಳಿಯಾಳ : ಪಟ್ಟಣದ ಹೊರಗಿನ ಗುತ್ತಿಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕು ಗೃಹರಕ್ಷಕ ದಳದ ಘಟಕದಿಂದ ಉಚಿತ ನೋಟು ಬುಕ್’ಗಳನ್ನು ವಿತರಿಸಲಾಯ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ಜಿ.ಕೆ.ರತ್ನಾಕರ ಅವರು ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕ ದಳದ ಕರ್ತವ್ಯ ನಿಷ್ಠೆ ಅತ್ಯಂತ ಶ್ಲಾಘನೀಯವಾಗಿದೆ. ಗೃಹ ರಕ್ಷಕ ದಳದ ಪ್ರತಿಯೊಬ್ಬ ವ್ಯಕ್ತಿಯ ಸೇವೆ ನಿಸ್ವಾರ್ಥವಾದ ಸೇವೆಯಾಗಿದೆ. ತಮ್ಮ ಕಾರ್ಯದ ಜೊತೆ ಜೊತೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೋಟ್ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಳಿಯಾಳ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಅಮೀನ್ ಅತ್ತಾರ ಅವರು ಮಾತನಾಡಿ ಗೃಹರಕ್ಷಕ ಸಿಬ್ಬಂದಿಗಳು ತಮ್ಮ ಕರ್ತವ್ಯದ ಜೊತೆ ಸಮಾಜಮುಖಿ ಕೆಲಸ ಕಾರ್ಯಗಳು ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಜಯ ಕರ್ನಾಟಕ ಸಂಘಟನೆಯ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷರಾದ ವಿಲಾಸ ಕಣಗಲಿ ಗೃಹರಕ್ಷಕ ಸಿಬ್ಬಂದಿಗಳ ಕಾರ್ಯವನ್ನು ಕೊಂಡಾಡಿದರು. ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಕಲ್ಲಪ್ಪ ಕದಂ ರವರು ಪ್ರಾಸ್ತವಿಕವಾಗಿ ಮಾತನಾಡಿ ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ಕೊಡುಗೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಾರುತಿ ಪಾಟೀಲ, ಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಡಿ.ಮಡಿವಾಳ, ಎ.ಎಸ್.ಐ ಶಬ್ಬೀರ್, ಗೃಹರಕ್ಷಕ ಹಿರಿಯ ಸಿಬ್ಬಂದಿಗಳಾದ ಮಂಜುನಾಥ ಕೈಸರೆ, ನಾಗರಾಜ ನಿರಂಜನ್, ಗೋವಿಂದ ಪವಾರ,ಶಿವಾಜಿ ತುಳಸೆ, ಉಮೇಶ ಪೂಜಾರಿ, ಸುರೇಶ ಹೈಬತ್ತಿ, ರವಿ ಮಿರಜಕರ, ಬಾಲಕೃಷ್ಣ ಮೊಕಾಶಿ ಹಾಗೂ ಗೃಹರಕ್ಷಕ/ರಕ್ಷಕಿ ಸಿಬ್ಬಂದಿಗಳು, ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.