ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-೩ ರ ಸಾಪ್ಟ್ ಲ್ಯಾಂಡಿಂಗ್ ಯಶಸ್ವಿಯಾಗಲಿ ಎಂದು ದೀಪವನ್ನು ಹಿಡಿದು ತಾಯಿ ಸರಸ್ವತಿಯಲ್ಲಿ ಪ್ರಾರ್ಥನೆ ಮಾಡಿ ಸರಸ್ವತಿ ಮೂರ್ತಿಯ ಎದುರು ವೃತ್ತಾಕಾರದಲ್ಲಿ (ಪೂರ್ಣ ಚಂದಿರನ ಆಕಾರದಲ್ಲಿ) ದೀಪವನ್ನು ಬೆಳಗಿಸುವದರ ಮೂಲಕ ಶುಭ ಹಾರೈಸಿದರು. ಪ್ರಾಂಶುಪಾಲರಾದ ಕಿರಣ ಭಟ್ಟರವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಇಸ್ರೋಗೆ ಈ ಸಮಯದಲ್ಲಿ ಶುಭ ಹಾರೈಸಿದರು. ನಂತರ
ವಿದ್ಯಾರ್ಥಿಗಳಿಗೆ ಚಂದ್ರಯಾನ-೩ ರ ಸಾಪ್ಟ್ ಲ್ಯಾಂಡಿಂಗ್ ನ ನೇರಪ್ರಸಾರವನ್ನು ವೀಕ್ಷಣೆ ಮಾಡಲು ಆಡಿಯೋ ವಿಶ್ವಲ್ ರೂಮಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಪಾದಾರ್ಪಣೆ ಮಾಡುತ್ತಿರುವ ದೃಶ್ಯವನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಮೊಗದಲ್ಲಿ ಜಗತ್ತನ್ನು ಗೆದ್ದ ಸಂಭ್ರಮ ಮನೆ ಮಾಡಿತ್ತು..
ಈ ಸಂದರ್ಭದಲ್ಲಿ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಹೆಗಡೆಯವರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಇಸ್ರೋ ಸಂಸ್ಥೆಯ ಹಾಗೂ ಭಾರತದ ಗರಿಮೆಯನ್ನು ಹೆಚ್ಚಿಸಿದ ಈ ಕ್ಷಣವನ್ನು ಕಣ್ತುಂಬಿ ಸಂತಸವನ್ನು ಚಪ್ಪಾಳೆ ಮತ್ತು ಜೈಕಾರ ಹಾಕುವುದರ ಮುಖಾಂತರ ವ್ಯಕ್ತಪಡಿಸಿದರು.