ಭಟ್ಕಳದಲ್ಲಿ ವಕೀಲರ ಮೇಲೆ ನಡೆದ ಹಲ್ಲೆಗೆ ದಾಂಡೇಲಿಯಲ್ಲಿ ವಕೀಲರ ಸಂಘದಿಂದ ಖಂಡನೆ 

ದಾಂಡೇಲಿ : ಜಿಲ್ಲೆಯ ಭಟ್ಕಳ ತಾಲೂಕಿನ ನ್ಯಾಯವಾದಿ ಗುರುದಾಸ.ಎಂ.ಮೊಗೇರ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮಕ್ಕಾಗಿ ಹಾಗೂ ವಕೀಲರ ರಕ್ಷಣ ಕಾಯ್ದೆಯನ್ನು ಅತಿ ಶೀಘ್ರ ಜಾರಿಗೆ ತರಬೇಕೆಂದು ಆಗ್ರಹಿಸಿ ದಾಂಡೇಲಿಯ ವಕೀಲರ ಸಂಘದಿಂದ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಮೂಲಕ ಬುಧವಾರ ಸಲ್ಲಿಸಲಾಯಿತು.

ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿಯಲ್ಲಿ ಭಟ್ಕಳದ ವಕೀಲರ ಮೇಲೆ ನಡೆದ ಹಲ್ಲೆ ಅತ್ಯಂತ ಖಂಡನೀಯ. ಹಲ್ಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ರಾಜ್ಯದ ಹಲವು ಭಾಗಗಳಲ್ಲಿ ಕಾರ್ಯನಿರತ ವಕೀಲರುಗಳ ಮೇಲೆ ಸಾಕಷ್ಟು ಇಂತಹ ಹಲ್ಲೆ ಘಟನೆಗಳು ನಡೆಯುತ್ತಿದ್ದು ವಕೀಲ ವೃತ್ತಿಬಾಂಧವರು ನಿರ್ಬೀತಿಯಿಂದ ತಮ್ಮ ವೃತ್ತಿಯನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗತೊಡಗಿದೆ.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾದ ನಿಟ್ಟಿನಲ್ಲಿ ಹಾಗೂ ರಾಜ್ಯದ ವಕೀಲರು ನಿರ್ಭೀತಿಯಿಂದ ತಮ್ಮ ವೃತ್ತಿಯನ್ನು ನಿರ್ವಹಿಸುವಂತಾಗಲು ವಕೀಲರ ರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್ ಕುಲಕರ್ಣಿ, ಕಾರ್ಯದರ್ಶಿ ಐ.ಸಿ ನಾಯ್ಕ, ವಕೀಲರುಗಳಾದ ಎಸ್.ಎಂ ದಬಗಾರ, ಎಂ ಸಿ ಹೆಗಡೆ, ಎಸ್. ಸೋಮಕುಮಾರ್, ವಿಶ್ವನಾಥ ಲಕ್ಷಟ್ಟಿ, ಮುಸ್ತಾಕ್ ಶೇಖ, ರಾಹುಲ್ ಬಾವಾಜಿ, ಮಂಜುನಾಥ್ ಬಂಡಿವಡ್ಡರ್, ಕವಿತಾ ಗಡೆಪ್ಪನವರ್, ಸುಮಿತ್ರಾ.ಕೆ, ರತ್ನದೀಪ.ಎನ್.ಎಂ, ಮಧು ಬಾವಾಜಿ, ಕೋಮಲ್  ಶಿಂದೆ, ಪ್ರಭಾ ಕುರುಡೇಕರ್ ಮೊದಲಾದವರು ಉಪಸ್ಥಿತರಿದ್ದರು.