ಜೋಯಿಡಾ : ತಾಲ್ಲೂಕಿನ ರಾಮನಗರದ ಕಲ್ಲಿನ ಕೋರೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ವಿವಾಹಿತ ಮಹಿಳೆಯರುಗಳ ಶವ ಪತ್ತೆಯಾಗಿರುವ ಘಟನೆ ಇಂದು ಸೋಮವಾರ ನಡೆದಿದೆ.
ರಾಮನಗರದ ಕೃಷ್ಣ ಗಲ್ಲಿಯ ನಿವಾಸಿ 26 ವರ್ಷ ವಯಸ್ಸಿನ ಮಂಜರಿ ದಯಾನಂದ ದೇಸಾಯಿ ಎಂಬ ವಿವಾಹಿತ ಮಹಿಳೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಈಕೆ ಮೊನ್ನೆ ಶನಿವಾರದಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ರಾಮನಗರದ ಪೊಲೀಸ್ ಠಾಣೆಯಲ್ಲಿ ನಿನ್ನೆ ಭಾನುವಾರ ಪ್ರಕರಣ ದಾಖಲಾಗಿತ್ತು. ಆದರೆ ಇಂದು ರಾಮನಗರದ ದಿಲೀಪ್ ಬಿಲ್ಡ್ಕಾನ್ ಎಂಬ ಕಂಪನಿಯ ಕಲ್ಲಿನ ಕೋರೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮಂಜರಿ ದಯಾನಂದ ದೇಸಾಯಿ ಈಕೆಯ ಮೃತದೇಹ ತೇಲುತ್ತಿತ್ತು.
ಮೃತಪಟ್ಟ ಮಂಜರಿ ದಯಾನಂದ ದೇಸಾಯಿ ಈಕೆಗೆ 2017 ರ ಜೂನ್ 03 ರಂದು ದಯಾನಂದ ದೇಸಾಯಿಯವರ ಜೊತೆ ವಿವಾಹವಾಗಿತ್ತು. ಇವರ ದಾಂಪತ್ಯ ಜೀವನಕ್ಕೆ 5 ವರ್ಷದ ಮಗಳು ಮತ್ತು 2 ವರ್ಷದ ಮಗ ಇದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ನಿತ್ಯಾನಂದ ಪಂಡಿತ್, ಪಿಎಸ್ಐ ಬಸವರಾಜ್ ಮಬನೂರು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಘಟನೆಯ ಕುರಿತು ಮೃತ ಸಹೋದರ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಮನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.