ದಾಂಡೇಲಿಗೆ ಮೊದಲ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ.ಆರ್.ಮಾನಕರ : ನಗರ ಸಭೆಯ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಭೆ

ದಾಂಡೇಲಿ : ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಟ್ಟ ಮೊದಲ ಬಾರಿಗೆ ದಾಂಡೇಲಿ ನಗರಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ.ಆರ್.ಮಾನಕರ ಅವರು ಸೋಮವಾರ ಭೇಟಿ ನೀಡಿದರು.

ನಗರ ಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ. ಆರ್.ಮಾನಕರ ಅವರನ್ನು ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ನಗರ ಸಭೆಯ ಪರವಾಗಿ ಗೌರವಪೂರ್ವಕವಾಗಿ ಸ್ವಾಗತಿಸಿ, ಬರಮಾಡಿಕೊಂಡರು.

ನಗರ ಸಭೆಯ ಆಡಳಿತಾಧಿಕಾರಿ ಕಾರ್ಯಾಲಯದಲ್ಲಿ ನಗರ ಸಭೆಯ ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ನಗರ ಸಭಾ ಸದಸ್ಯರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮನೆ ಮನೆಗೆ ಯುಜಿಡಿ ಸಂಪರ್ಕ ನೀಡುವ ಬಗ್ಗೆ ಚರ್ಚಿಸಿದರು. ನಗರ ಸಭೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಹೇಳಿದರೂ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಮನಸ್ಸಿಗೆ ಬಂದ ರೀತಿಯಲ್ಲಿ ನಗರ ಸಭೆಯ ಬಿಲ್ ಸಂಗ್ರಹಕಾರರು ಆಸ್ತಿ ತೆರಿಗೆಯನ್ನು ನಗರ ಸಭೆಯ ತಮ್ಮ ಕೊಠಡಿಯಲ್ಲೆ ಕೂತೆ ನಿರ್ಧರಿಸುತ್ತಾರೆ. ಮನೆ ಭೇಟಿ ಮಾಡಿ ಪರಿಶೀಲಿಸಿ ಆಸ್ತಿ ತೆರಿಗೆಯನ್ನು ನಿರ್ಧರಿಸುವುದಿಲ್ಲ ಎಂದು ನಗರ ಸಭಾ ಸದಸ್ಯ ನಂದೀಶ್ ಮುಂಗರವಾಡಿಯವರು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಉತಾರ ಕೊಡಲು ಕಾಡಿಸುತ್ತಿದ್ದಾರೆ. ಅರ್ಜಿ ನೀಡಿ ಮೂರು ತಿಂಗಳಾದರೂ ಸಂಬಂಧಿಸಿದ ಸಿಬ್ಬಂದಿ ಉತಾರ ನೀಡುತ್ತಿಲ್ಲ ಎಂದು ನಗರ ಸಭಾ ಸದಸ್ಯೆ ಪದ್ಮಜಾ ಪ್ರವೀಣ್ ಜನ್ನು ಅವರು ನಗರ ಸಭೆಯ ಸಿಬ್ಬಂದಿ ಫಿಲೀಪ್ ಮಾದರ ಅವರ ಮೇಲೆ ಆರೋಪ ವ್ಯಕ್ತಪಡಿಸಿದರು. ಆಗ ಜಿಲ್ಲಾಧಿಕಾರಿ ಫಿಲೀಪ್ ಅವರಿಗೆ ಈ ರೀತಿ ಮಾಡುವುದು ಸರಿಯಲ್ಲ ಅಂದಾಗ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಬಿಲ್ ಸಂಗ್ರಹಕಾರರಿಗೆ ಕಂಪ್ಯೂಟರ್ ಜ್ಞಾನದ ಕೊರತೆಯಿದೆ. ಹಾಗಾಗಿ ಈ ಸಮಸ್ಯೆಯಾಗುತ್ತಿದೆ ಎಂದರು. ತಾಂತ್ರಿಕ ಜ್ಞಾನ ಅತೀ ಅಗತ್ಯಬೇಕು. ಆದಷ್ಟು ಬೇಗ ಕಂಪ್ಯೂಟರ್ ಕಲಿತು, ಕೆಲಸ ಸುಲಲಿತವಾಗಿ ಮಾಡುವಂತೆ ಜಿಲ್ಲಾಧಿಕಾರಿಯವರು ಸೂಚನೆಯನ್ನು ನೀಡಿದರು. ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಸದಸ್ಯೆ ರುಕ್ಮಿಣಿ ಬಾಗಾಡೆ, ಆಸೀಪ್ ಮುಜಾವರ, ವೆಂಕಟ್ರಮಣಮ್ಮ ಮೈಥುಕುರಿ, ಶಾಹಿದಾ ಪಠಾಣ್, ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ನಗರ ಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಅವರು ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣಗೊಂಡು, ಉದ್ಘಾಟನೆಯಾಗಿ, ಇನ್ನೂ ಬಳಕೆಯಾಗುತ್ತಿಲ್ಲ. ಕಾರಣ ಅಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿದ್ದು, ಮೂಲಸೌಕರ್ಯವನ್ನು ಒದಗಿಸಿ, ಬಳಕೆಗೆ ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ನಗರ ಸಭೆಯ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ದೂರುಗಳು ಬರದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು. ದೂರು ಬಂದಲ್ಲಿ ನಾನು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಕೆಲಸಗಾರರಿಗೆ ಸದಾ ಬೆಂಬಲವಿದೆ ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ, ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ನಾಯ್ಕರ್, ನಗರ ಸಭೆಯ ಸದಸ್ಯರು, ನಗರ ಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.