ದಾಂಡೇಲಿ : ಹಿಂದೂ ಧರ್ಮಿಯರ ಪವಿತ್ರ ಆರಾಧನೆಗಳಲ್ಲಿ ಒಂದಾಗಿರುವ ನಾಗದೇವರ ವಿಶೇಷ ದಿನವಾದ ಇಂದು ಸೋಮವಾರ ಬೆಳಗ್ಗಿನಿಂದಲೇ ನಾಗರಪಂಚಮಿ ಹಬ್ಬವನ್ನು ದಾಂಡೇಲಿ ನಗರದಲ್ಲಿ ಸಂಭ್ರಮ, ಸಡಗರ ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಇಂದು ಬೆಳಗ್ಗೆಯಿಂದಲೆ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ನಾಗಾದೇವತಾ ಕಟ್ಟೆ, ನಾಗದೇವತಾ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನಗಳ ಆವರಣದಲ್ಲಿರುವ ನಾಗದೇವತಾ ಕಟ್ಟೆಗಳ ದರ್ಶನವನ್ನು ಪಡೆದು ನಾಗದೇವರಿಗೆ ಹಾಲಿನ ಅಬಿಷೇಕವನ್ನು ಮಾಡಿ, ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.
ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ.ಹಾಲೇಶ್ವರ ಶಿವ ದೇವಸ್ಥಾನ, ಅಂಬೇವಾಡಿಯ ನಾಗದೇವತಾ ದೇವಸ್ಥಾನ, ಅಂಬೇವಾಡಿಯ ಬಲಮುರಿ ಶ್ರೀ.ಗಣಪತಿ ದೇವಸ್ಥಾನ, ಕುಳಗಿ ರಸ್ತೆಯ ಈಶ್ವರ ದೇವಸ್ಥಾನ, ಕುಳಗಿ ರಸ್ತೆಯ ಶ್ರೀ.ವೆಂಕಟರಮಣ ದೇವಸ್ಥಾನ, ಕುಳಗಿ ರಸ್ತೆಯ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿ ನಾಗರಪಂಚಮಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.