ಅಂಕೋಲಾ: ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಹರಿಕಾರರು. ಸಾಮಾಜಿಕ ನ್ಯಾಯ ಒದಗಿಸಲು ಬಗರ್ ಹುಕುಂ ಸಾಗುವಳಿ ಪದ್ಧತಿ ಮತ್ತು ಅನೇಕ ಐತಿಹಾಸಿಕ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಹಿಂದುಳಿದ ವರ್ಗದವರು ಬಡವರು ಮತ್ತು ರೈತರು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಹಶೀಲ್ದಾರ್ ಅಶೋಕ ಭಟ್ ಹೇಳಿದರು.
ರವಿವಾರ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸಭಾಭವನದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇವರಾಜ ಅರಸು ಕೈಗೊಂಡ ನಿರ್ಣಯಗಳು ಇಂದಿಗೂ ಪ್ರಸ್ತುತವಾಗಿದ್ದು ಅವರೊಬ್ಬ ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು ಎಂದರು.
ಕೆಎಲ್‍ಇ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಮಂಜುನಾಥ ಇಟಗಿ ಅವರು ಡಿ.ದೇವರಾಜ ಅರಸು ಅವರ ಜೀವನ ಮತ್ತು ಆಡಳಿತಾತ್ಮಕ ಕಾರ್ಯಗಳ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿದ್ದ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಾಗಭೂಷಣ ಕಲ್ಮನೆ, ಬಿಇಓ ಮಂಗಳಲಕ್ಷೀ ಪಾಟೀಲ್, ನಾಟಿ ವೈದ್ಯ ಹನುಮಂತ ಗೌಡ, ಹಿರಿಯ ನಾಗರಿಕ ಹೊನ್ನಪ್ಪ ನಾಯಕ ಮೊಗಟಾ ಮಾತನಾಡಿದರು. ಪದ್ಮಶ್ರೀ ತುಳಸಿ ಗೌಡ ಸಿಡಿಪಿಒ ಸವಿತಾ ಶಾಸ್ತ್ರೀಮಠ ಇದ್ದರು.
ಬಿಸಿಎಂ ಪ್ರಭಾರ ತಾಲೂಕು ಕಲ್ಯಾಣಾಧಿಕಾರಿ ಸೀತಾ ಗೌಡ ಪ್ರಾಸ್ತವಿಕ ಮಾತನಾಡಿದರು.
ವಿದ್ಯಾರ್ಥಿನಿ ಮಾಲಾ ಪಟಗಾರ ಪ್ರಾರ್ಥಿಸಿದರು. ಚಂದನಾ ನಾಯ್ಕ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ವಸತಿ ನಿಲಯ ಮೇಲ್ವಿಚಾರಕ ಶಿವಾನಂದ ನಾಯ್ಕ, ವಿದ್ಯಾರ್ಥಿನಿ ಭಾರತಿ ಪಟಗಾರ ನಿರ್ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.