ಅಂಕೋಲಾ: ತಹಶೀಲ್ಧಾರರ ಕಾರ್ಯಾಲಯ ಅಂಕೋಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಮತ್ತು ಕ್ಲಾಸಿಯೊ ಶೈಕ್ಷಣಿಕ, ಸಾಹಿತ್ಯಿಕ, ಕಲೆ,ಕ್ರೀಡೆ ಮತ್ತು ಸಾಂಸ್ಕೃತಿಕ ಹಿತೋತ್ಸಾಹಿ ಸಂಘ ಅಂಕೋಲಾ ಇವರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಸಮೂಹನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ದಂಡಾಧಿಕಾರಿ ಅಶೋಕ ಭಟ್ ಮಾತನಾಡಿ ದಕ್ಷಿಣದ ಬಾರ್ಡೋಲಿ ಸ್ವಾತಂತ್ರ್ಯದ ಸಂಗ್ರಾಮದ ನೆಲ ಅಂಕೋಲೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಕ್ಲಾಶಿಯೋ ಸಂಘ ಹಲವಾರು ವರ್ಷಗಳಿಂದ ದೇಶಭಕ್ತಿ ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸುತ್ತ ಬಂದಿರುವದು ಒಂದು ವಿಶೇಷವಾಗಿದೆ. ಇದರಿಂದ ವಿದ್ಯಾರ್ಥಿಗಳು ಸ್ವಾತಂತ್ರ್ಯದ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಲು ಸಾಧ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ ಸ್ವಾತಂತ್ರ್ಯೋತ್ಸವ ದಿನದಂದು ದೇಶಭಕ್ತಿಯನ್ನು ಬಿಂಬಿಸುವ ನೃತ್ಯ ಸ್ಪರ್ಧೆ ಆಯೋಜಿಸಿದ ಕ್ಲಾಸಿಯೋ ಸಂಘ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಲ ಹಿರಿಯ ವಕೀಲ ವಿ.ಎಸ್. ನಾಯಕ ಮಾತನಾಡಿ ದೇಶ ಭಕ್ತಿಯನ್ನು ಸಾರುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಎಂದರು. ಪತ್ರಕರ್ತ ಹಾಗೂ ಸಂಗೀತ ನಿರ್ದೇಶಕ ನಾಗರಾಜ ಜಾಂಬಳೇಕರ ಮಾತನಾಡಿ ಭಾರತದ ಭವ್ಯ ಪರಂಪರೆಯಾದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಇವೆಲ್ಲವೂ ಈ ದೇಶದ ಶ್ರೇಷ್ಠ ಸಂಸ್ಕ್ರತಿ. ಸ್ವಾತಂತ್ರ್ಯದ ಸಾರ್ವಭೌಮತ್ವದ ಜೊತೆಗೆ ನಮ್ಮ ದೇಶದ ಸಂಸ್ಕ್ರತಿಯನ್ನೂ ಉಳಿಸಿಕೊಳ್ಳಬೇಕು ಮತ್ತು ಈ ದೇಶದ ಮಣ್ಣನ್ನು ಗೌರವಿಸಬೇಕು ಎಂದರು. ವೇದಿಕೆಯಲ್ಲಿ ತಾಲೂಕಾಸ್ಪತ್ರೆಯ ನೇತ್ರ ತಜ್ಞರಾದ ರೂಪಾ ವಿ ನಾಯ್ಕ, ಕ್ಲಾಸಿಯೊ ಕಾರ್ಯದರ್ಶಿ ರಾಮಕೃಷ್ಣ ಗೌಡ ಉಪಸ್ಥಿತರಿದ್ದರು.
ತಾಲೂಕು ಮಟ್ಟದ ನೃತ್ಯ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಪಿ.ಎಂ.ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಜೆ.ಸಿ.ಪ್ರೌಢ ಶಾಲೆ ದ್ವಿತೀಯ ಮತ್ತು ಪಿ.ಎಂ.ಕನ್ನಡ ಮಾಧ್ಯಮ ಪ್ರೌಢ ಶಾಲೆ ತೃತೀಯ ಬಹುಮಾನ ಪಡೆದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆ ಪ್ರಥಮ, ಹಿರಿಯ ಪ್ರಾಥಮಿಕ ಶಾಲೆ ಅವರ್ಸಾ ದ್ವಿತೀಯ ಬಹುಮಾನ ಪಡೆದರು.
ಕ್ಲಾಸಿಯೊ ನಾಟ್ಯರಾಣಿ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಪಾಯಿಂಟ್ ಔಟ್ ಡಾನ್ಸ್ ಅಕಾಡೆಮಿ ನೃತ್ಯ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನವೂ ನಡೆಯಿತು.
ಶಿಕ್ಷಕ ಗಣಪತಿ ನಾಯಕ, ಕೊರಿಯೋಗ್ರಾಫರ್ ಮನೋಜ ಆಚಾರಿ, ಕ್ಲಾಸಿಯೊ ನಾಟ್ಯರಾಣಿ ಕೇಂದ್ರದ ಮೇಲ್ವಿಚಾರಕಿ ಅನುರಾಧಾ ಶಾನಭಾಗ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ಲಾಸಿಯೋ ಸಂಘದ ಅಧ್ಯಕ್ಷ ಹಾಗೂ ಜೈಹಿಂದ್ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಭಾಕರ ಬಂಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಧುಕರ ಕೇಣಿಕರ ಕಾರ್ಯಕ್ರಮವನ್ನು ನಿರ್ವಹಿಸಿದರು. ಮನೋಜ ಗುರವ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಪ್ರಶಾಂತ ಡಿ ನಾರ್ವೇಕರ, ಮನೋಜ ಆಚಾರಿ, ಕ್ಲಾಶಿಯೊ ಪದಾಧಿಕಾರಿಗಳು, ನೃತ್ಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.