ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ ಇವರು ಪ್ರತೀ ವರ್ಷವೂ ನೀಡುತ್ತಾ ಬಂದಿರುವ ವಿನಯಶ್ರೀ ಸಮರ್ಥ ಶಿಕ್ಷಕ ಪುರಸ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಗೋಕರ್ಣದ ಆಡುಕಟ್ಟಾದ ಹಿರಿಯ ಪ್ರಾಥಮಿಕ ಶಾಲೆ ನಂ 2 ದ ಮುಖ್ಯ ಶಿಕ್ಷಕ
ಪರಮೇಶ್ವರ ಎಂ ಮುಕ್ರಿ ಅವರ ಮುಡಿಗೇರಿದೆ.
ಮೂಲತಃ ಕುಮಟಾ ತಾಲೂಕಿನ ವಾಲಗಳ್ಳಿಯವರಾದ ಪಿ ಎಂ ಮುಕ್ರಿ ಅವರು
ವೃತ್ತಿಶಿಕ್ಷಣ ತರಬೇತಿ ಪೂರೈಸಿದ ಬಳಿಕ 1991 ರಲ್ಲಿ ಸರಕಾರಿ ಪ್ರಾಥಮಿ ಶಿಕ್ಷಕರಾಗಿ ನೇಮಕ ಗೊಂಡು ಸಿದ್ದಾಪುರ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿಯಲ್ಲಿ ಸೇವೆಯನ್ನು ಪ್ರಾರಂಭಿಸಿದರು.
ಮುಂದೆ 2001 ರಲ್ಲಿ ಕೆ ಪಿ ಎಸ್ ಸಂತೇಗಳಿಯಲ್ಲಿ ಪದೋನ್ನತ ಮುಖ್ಯ ಶಿಕ್ಷಕರಾದರು. 2005 ರಿಂದ 2011 ರವರೆಗೆ ಹಂದಿಗೋಣ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ 2011 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕೇರಿಯಲ್ಲಿ ಪದೋನ್ನತ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದರು 2012 ರಿಂದ 2022 ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಿರ್ಜಾನ ವಲಯದ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2 ಗೋಕರ್ಣದ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಪಿ ಎಂ ಸರ್ ಎಂದೇ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಇವರು ನಾಟಕ,ಸುಗ್ಗೀಕುಣಿತ, ಜಾನಪದ ನೃತ್ಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದು ಉತ್ತಮ ಗಾಯಕರಾಗಿದ್ದಾರೆ.ಕ್ರಿಕೇಟ್, ವಾಲಿಬಾಲ್ ಸೆಟೆಲ್ ಗಳಲ್ಲೂ ಅಭಿರುಚಿಯನ್ನು ಹೊಂದಿದ್ದಾರೆ.
ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಪಿ ಎಂ ಸರ್ ಅವರು ನಲಿಕಲಿ ಕೆ ಎಸ್ ಬಿ ಸಿ ಸಿಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಟ್ಟದ ಪಠ್ಯಪುಸ್ತಕ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ನೋಡೆಲ್ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಅನ್ಯರಾಜ್ಯಗಳಿಂದ ಬಂದ ಪುಸ್ತಕಗಳನ್ನು ಯಾವುದೇ ಅಳುಕಿಲ್ಲದೇ ಸಮರ್ಥವಾಗಿ ಪೂರೈಸಿ ಜನಮನ ಗೆದ್ದ ಪಿ ಎಂ ಅವರ ಕರ್ತವ್ಯ ಶೃದ್ಧೆಗೆ ದೊರೆತ ಸಮರ್ಥ ಪುರಸ್ಕಾರ ಇದಾಗಿದೆ .
ದಿನಾಂಕ 19 ಅಗಷ್ಟ 2023 ರ ಶನಿವಾರ ಕುಮಟಾದ ಸಿ ವಿ ಎಸ್ ಕೆ ಹೈಸ್ಕೂಲ್ ಪ್ರಾರ್ಥನಾ ಮಂದಿರದಲ್ಲಿ ಮುಂಜಾನೆ 11 ಗಂಟೆ ಜರುಗುವ ಈ ಕಾರ್ಯಕ್ರಮದಲ್ಲಿ ಹೆಸರಾಂತ ನಟ. ನಿರ್ದೇಶಕ ರಂಗಕರ್ಮಿ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಅವರು ಪುರಸ್ಕಾರ ಪ್ರದಾನ ಗೈಯಲಿದ್ದು ಉಪನಿರ್ದೇಶಕರು ಅಭಿವೃದ್ಧಿ. ಸಾರ್ವಜನಿಕ ಶಿಕ್ಷಣ ಇಲಾಖೆ
ಎನ್ ಟಿ ನಾಯಕರು ಮುಖ್ಯ ಅತಿಥಿಯಾಗಿ ಪಾಲ್ಗೊಳಲಿದ್ದಾರೆ.