ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಇತಿಹಾಸ ಸೃಷ್ಟಿಸಲ್ಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!

ಶುಕ್ರವಾರದಿಂದ ಅಂದರೆ, ಆಗಸ್ಟ್ 18 ರಿಂದ ಭಾರತ ಹಾಗೂ ಐರ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಬುಮ್ರಾ ನಾಯಕತ್ವದಲ್ಲಿ ಭಾರತ ಯುವ ಪಡೆ ಈ ಸರಣಿಗಾಗಿ ಈಗಾಗಲೇ ಐರ್ಲೆಂಡ್​ಗೆ ತೆರಳಿದೆ.

ಪ್ರಸ್ತುತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಉಪನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕ ಸಾಮಾನ್ಯ ಆಟಗಾರರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಅನೇಕ ಹಿರಿಯರು ಗೈರುಹಾಜರಾದ ಕಾರಣ, ಆಯ್ಕೆಗಾರರು ಬುಮ್ರಾಗೆ ನಾಯಕತ್ವವನ್ನ ಹಸ್ತಾಂತರಿಸಿದ್ದಾರೆ.

ಇಂಜುರಿಗೆ ತುತ್ತಾಗಿ ಬರೋಬ್ಬರಿ 11 ತಿಂಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದ ಬುಮ್ರಾ ಇದೀಗ ಐರ್ಲೆಂಡ್ ವಿರುದ್ಧ ಅಖಾಡಕ್ಕಿಳಿಯುತ್ತಿದ್ದು, ತಮ್ಮ ನಾಯಕತ್ವದ ಮೊದಲ ಸರಣಿಯಲ್ಲೇ ತಮ್ಮ ಹೆಸರನ್ನು ಇತಿಹಾಸದ ಪುಸ್ತಕಗಳಲ್ಲಿ ದಾಖಲಿಸಲಿದ್ದಾರೆ.

ವಾಸ್ತವವಾಗಿ ಭಾರತ ಇದುವರೆಗೆ ಟಿ20ಯಲ್ಲಿ 10 ನಾಯಕರನ್ನು ಕಂಡಿದೆ. ಇವರಲ್ಲಿ 9 ಮಂದಿ ಮುಂಚೂಣಿಯ ಬ್ಯಾಟರ್‌ಗಳಾಗಿದ್ದರೆ, ಪಾಂಡ್ಯ ಈ ಪಟ್ಟಿಯಲ್ಲಿರುವ ಏಕೈಕ ಆಲ್‌ರೌಂಡರ್ ಆಗಿದ್ದಾರೆ. ಇದೀಗ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲ್ಲಿರುವ ಬುಮ್ರಾ ಚುಟುಕು ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಇನ್ನು ಟಿ20 ಮಾದರಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ನಾಯಕರನ್ನು ನೋಡುವುದಾದರೆ, ಈ ಮಾದರಿಯಲ್ಲಿ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ ಶ್ರೇಯ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ.

ಸೆಹ್ವಾಗ್ ಬಳಿಕ 2007 ಟಿ20 ವಿಶ್ವಕಪ್​ಗೆ ತಂಡದ ನಾಯಕತ್ವವನ್ನು ಎಂಎಸ್ ಧೋನಿಗೆ ಹಸ್ತಾಂತರಿಸಲಾಯಿತು. ಅಂದಿನಿಂದ 2016 ರವರೆಗೆ ಧೋನಿ ಟಿ20 ತಂಡವನ್ನು ಮುನ್ನಡೆಸಿದರು. ಈ ನಡುವೆ ಸುರೇಶ್ ರೈನಾ ಮತ್ತು ಅಜಿಂಕ್ಯ ರಹಾನೆ ಕೂಡ ಕೆಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಬಳಿಕ 2017 ರಲ್ಲಿ, ವಿರಾಟ್ ಕೊಹ್ಲಿ ಅವರನ್ನು ಭಾರತದ ಪೂರ್ಣ ಸಮಯದ ವೈಟ್-ಬಾಲ್ ನಾಯಕನಾಗಿ ಆಯ್ಕೆ ಮಾಡಲಾಯಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕೂಡ ತಂಡವನ್ನು ಮುನ್ನಡೆಸಿದ್ದರು. 2022ರಲ್ಲಿ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಕೂಡ ಟೀಂ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಪಡೆದಿದ್ದರು.

ಈ ವಾರದ ಕೊನೆಯಲ್ಲಿ ಬುಮ್ರಾ ಭಾರತದ 11 ನೇ ಟಿ20 ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 2022 ರಲ್ಲಿ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿದ್ದ ಬುಮ್ರಾ, ಕಪಿಲ್ ದೇವ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಮೊದಲ ವೇಗಿ ಎನಿಸಿಕೊಂಡಿದ್ದರು.