ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮುಕ್ತಾಯದ ನಂತರ, ಇದೀಗ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಸರಣಿಯ ಮೊದಲ ಪಂದ್ಯದ್ಯ ಶುಕ್ರವಾರ (ಆಗಸ್ಟ್ 18) ರಂದು ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆಯಲ್ಲಿದೆ.
ಬಳಿಕ ಸರಣಿಯ ಮುಂದಿನ ಎರಡು ಪಂದ್ಯಗಳು ಕ್ರಮವಾಗಿ ಆಗಸ್ಟ್ 20 ಮತ್ತು 23 ರಂದು ಅದೇ ಸ್ಥಳದಲ್ಲಿ ನಡೆಯಲ್ಲಿವೆ. ಸೆಪ್ಟೆಂಬರ್ 25, 2022 ರಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಟೀಂ ಇಂಡಿಯಾಕ್ಕೆ ಮರಳುತ್ತಿದ್ದಾರೆ.
ಈ ಐರೋಪ್ಯ ರಾಷ್ಟ್ರದ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈ ಐರ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಈ ನಾಲ್ಕು ಆಟಗಾರರು ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.
ರಿಂಕು ಸಿಂಗ್: ಈ ಬಾರಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರಿಸಿದ್ದ ಅಲಿಗಢ್ ಮೂಲದ ರಿಂಕು, ಏಕಾಂಗಿಯಾಗಿ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಈ ಕಾರಣದಿಂದಾಗಿ ಅವರು ಈಗ ಐರ್ಲೆಂಡ್ ಸರಣಿಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲದೆ ಗೇಮ್ ಫಿನಿಶರ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ ರಿಂಕುಗೆ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆ ಇದೆ.
ಪ್ರಸಿದ್ಧ್ ಕೃಷ್ಣ: ಬುಮ್ರಾ ಅವರಂತೆಯೇ ಪ್ರಸಿದ್ಧ್ ಕೃಷ್ಣ ಕೂಡ ಸುದೀರ್ಘ ಗಾಯದ ವಿರಾಮದ ನಂತರ ಭಾರತ ತಂಡಕ್ಕೆ ಮರಳುತ್ತಿದ್ದಾರೆ. 2022 ರ ಆಗಸ್ಟ್ 20 ರಂದು ಜಿಂಬಾಬ್ವೆ ವಿರುದ್ಧ ಭಾರತದ ಪರ ಈ ಕರ್ನಾಟಕದ ವೇಗಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದುವರೆಗೆ 14 ಏಕದಿನ ಪಂದ್ಯಗಳನ್ನಾಡಿರುವ ಪ್ರಸಿದ್ಧ್, ಅದರಲ್ಲಿ 25 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಅವರಿಗಿನ್ನೂ ಟಿ20 ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದೀಗ ಐರ್ಲೆಂಡ್ ಪ್ರವಾಸದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗುವುದು ಖಚಿತವಾಗಿದೆ.
ಶಹಬಾಜ್ ಅಹ್ಮದ್: ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ, ಬಂಗಾಳದ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಐರ್ಲೆಂಡ್ ಪ್ರವಾಸದಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿಪರ ಉತ್ತಮ ಪ್ರದರ್ಶನ ನೀಡಿದ್ದ ಶಹಬಾಜ್, ಕಳೆದ ವರ್ಷ ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯ ಆಡಿದ್ದರು. ಆದರೆ ಟೀಂ ಇಂಡಿಯಾ ಕಳೆದ ವರ್ಷ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದ ಕಾರಣ ಇಲ್ಲಿಯವರೆಗೆ ಕಡಿಮೆ ಸ್ವರೂಪದಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಆದರೆ ಐರ್ಲೆಂಡ್ ವಿರುದ್ಧ ಅವರು ಟಿ20 ಕ್ಯಾಪ್ ಧರಿಸುವ ಸಾಧ್ಯತೆ ಹೆಚ್ಚಿದೆ.
ಜಿತೇಶ್ ಶರ್ಮಾ: ಜಿತೇಶ್ ಶರ್ಮಾ ಅವರು ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸರಣಿಗಾಗಿ ಭಾರತ ಟಿ20 ತಂಡದ ಭಾಗವಾಗಿದ್ದರು. ಆದರೆ ಈ ಪ್ರವಾಸದಲ್ಲಿ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಜಿತೇಶ್, ಒಂದು ಅಥವಾ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.