ಅಪರಿಚಿತ ವ್ಯಕ್ತಿಯ ಶವ ಪತ್ತೆ; ಶವ ಹೊತ್ತು ಸಾಗಿಸಿ ಮಾದರಿಯಾದ ಪಿಎಸ್ಐ

ಅಂಕೋಲಾ: ತಾಲೂಕಿನ ಹೊನ್ನೆಬೈಲ್ ನ ಎತ್ತುಗಲ್ ಸಮುದ್ರ ದಂಡೆಯ ಮೇಲೆ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎತ್ತುಗಲ್ ಸಮುದ್ರ ದಂಡೆಯ ಕಟ್ಟಿಗೆ ರಾಶಿತ ಮೇಲೆ ಪತ್ತೆಯಾಗಿರುವ ಮೃತದೇಹ ಪತ್ತೆಯಾಗಿದ್ದು ಸುಮಾರು 30 ರಿಂದ 40 ವರ್ಷ ಪ್ರಾಯದ ವ್ಯಕ್ತಿಯಾಗಿದ್ದಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯ ಬಲ ಅಂಗೈ ತುಂಡಾಗಿದ್ದು ಕೆಳ ದವಡೆ ಸಂಪೂರ್ಣಕಿತ್ತುಹೋಗಿದೆ. ಸುಮಾರು 20 ದಿನಗಳ ಹಿಂದೆ ಸತ್ತಿರುವ ಶಂಕೆಯಿದ್ದು ಕೊಳೆತಂತಿರುವ ದೇಹದ ಮೂಳೆಗೆ ಕೇವಲ ಚರ್ಮದ ಹೊದಿಕೆ ಮಾತ್ರ ಇದ್ದು ಮಾಂಸವೇ ಇಲ್ಲದಂತೆ ಕಾಣುತ್ತಿದೆ. ಪಿಎಸೈ ಉದ್ದಪ್ಪನವರ ಕಾರ್ಯ ಶ್ಲಾಘನೀಯ: ಮೃತ ವ್ಯಕ್ತಿಯ ಶವ ಸಾಗಿಸುವ ಸಂದರ್ಭದಲ್ಲಿ ಅಂಕೋಲಾ ಠಾಣೆಯ ಪಿ.ಎಸ್.ಐ ಉದ್ದಪ್ಪ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡುವ ಜೊತೆಗೆ ತಾವೂ ಕೂಡ ಅವರೊಂದಿಗೆ ಕೈ ಜೋಡಿಸಿ ಮೃತದೇಹವನ್ನು ಮೇಲೆತ್ತಿ ಸಾಗಿಸಲು ನೆರವಾದರು. ಉದ್ದನೆಯ ಕಟ್ಟಿಗೆಗೆ ಮೃತದೇಹ ಕಟ್ಟಿ, ಹೆಗಲ ಮೇಲೆ ಹೊತ್ತು, ಕಲ್ಲು ಬಂಡೆಗಳ ಮಧ್ಯದ ದುರ್ಗಮ ಪ್ರದೇಶದಲ್ಲಿನ ಕಿರಿದಾದ ದಾರಿಯಲ್ಲಿ ಸಾಗಿ ಕಿಲೋಮೀಟರ್ಗಳಷ್ಟು ನಡೆದು ಶವ ಸಾಗಿಸುವ ರಕ್ಷಕ ವಾಹನದವರೆಗೂ ತಲುಪಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿತ್ತು.
ಪೋಲೀಸ್ ಸಿಬ್ಬಂದಿಗಳಾದ ಸತೀಶ ಅಂಬಿಗ, ಜಗದೀಶ ನಾಯ್ಕ, ನಂದನ ಶೆಟ್ಟಿ, ದೇವಾನಂದ, ಸ್ಥಳೀಯ ಮಾಜಿ ಗ್ರಾಪಂ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಮಾದೇವ ಸುಬ್ಬು ಗುನಗ, ಪ್ರಮುಖರಾದ ಬೊಮ್ಮಾ ಗೌಡ, ಲೋಹಿತ ಗೌಡ, ಅರಣ್ಯ ಇಲಾಖೆ ಸಿಬ್ಬಂದಿ ನೀಲಾಧರ ಗೌಡ ರಕ್ಷಕ ವಾಹನ ಚಾಲಕ ವಿಜಯ ಕುಮಾರ ನಾಯ್ಕ ಮತ್ತಿತರರು ಸಹಕರಿಸಿದರು. ಮೃತ ವ್ಯಕ್ತಿ ಯಾರು ಹಾಗೂ ಯಾವ ಕಾರಣದಿಂದ ಸತ್ತಿರಬಹುದು ಎಂಬುದು ಇದುವರೆಗೂ ತಿಳಿದುಬಂದಿಲ್ಲವಾದ್ದರಿಂದ ಪೊಲೀಸ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ