ಪೊಲೀಸರ ಬಲೆಗೆ ಬಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ: ಅಂಕೋಲಾ ಪೊಲೀಸರ ದಿಟ್ಟ ಕಾರ್ಯಾಚರಣೆ

ಅಂಕೋಲಾ: ತಾಲೂಕಿನಲ್ಲಿ ಸದ್ದು ಮಾಡಿದ್ದ ಬೈಕ್ ಕಳ್ಳತನದ ಆರೋಪಿಯನ್ನು ಬಂಧಿಸಿದ ಅಂಕೋಲಾ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಯಿಂದ ಸಾರ್ವಜನಿಕರಿಗಿದ್ದ ಆತಂಕ ನಿವಾರಣೆಯಾಗಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಬೋಳಂಬಳ್ಳಿ ಕಂಬದಕೋಣ ನಿವಾಸಿ ರಂಜಿತ್ ರಾಮಚಂದ್ರ ಪೂಜಾರಿ(23) ಬಂಧಿತ ಆರೋಪಿ.
ಅಂಕೋಲಾ ತಾಲೂಕಿನ ಠಾಣಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕುಮಟಾ ರಸ್ತೆಯ ವಂದಿಗೆಯ ಶ್ರೀ ಮಂಜುನಾಥ ಸ್ಟೋರ್ಸ್ ಎದುರಿಗೆ ನಿಲ್ಲಿಸಿಟ್ಟಿದ್ದ ಹೀರೋ ಹೋಂಡಾ ಬೈಕ್ ಜುಲೈ 20 ರ ಮಧ್ಯರಾತ್ರಿ ಕಳ್ಳತನವಾಗಿರುವ ಕುರಿತು ಬೈಕ್ ಮಾಲಿಕ ರಾಜೇಶ ಶಿವಾನಂದ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ಸಂದರ್ಭದಲ್ಲಿ ಇನ್ನು ಕೆಲವೆಡೆ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಸದರಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನರವರ ನಿರ್ದೇಶನದದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಬಿ. ಜಯಕುಮಾರ ಹಾಗೂ ಕಾರವಾರ ಉಪವಿಭಾಗದ ಪೊಲೀಸ ಉಪಾಧೀಕ್ಷಕರಾದ ವೆಲೆಂಟೈನ್‌ ಡಿಸೋಜಾರವರ ಮಾರ್ಗದರ್ಶನದಂತೆ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿಯವರ ನೇತೃತ್ವದಲ್ಲಿ ಠಾಣೆಯ ಪಿ.ಎಸ್.ಐ. ಜಯಶ್ರೀ ಪ್ರಭಾಕರ ಹಾಗೂ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ ಅವರನ್ನು ಒಳಗೊಂಡ ತಂಡ ಕಾರ್ಯಚರಣೆಗೆ ಇಳಿದಿತ್ತು.

ಆರೋಪಿ ರಂಜಿತ್ ಸ್ನೇಹಿತನೊಂದಿಗೆ ಸೇರಿ ಬೈಕ್ ಕಳ್ಳತನ ಮಾಡಿದ್ದು ಆತನ ಸ್ನೇಹಿತ ತಲೆಮರೆಸಿಕೊಂಡು ನಾಪತ್ತೆಯಾಗಿದ್ದಾನೆ. ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ ಇತರೆ ಪ್ರಕರಣಗಳ ಮಾಹಿತಿಯನ್ನು ಕಲೆಹಾಕಲಾಗಿದ್ದು ಶೀಘ್ರವೇ ಆರೋಪಿಯನ್ನು ಬಂದಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.