ದಾಂಡೇಲಿ : ಬರ್ಚಿ ರಸ್ತೆಯಲ್ಲಿರುವ ನಗರದ ಕೇಂದ್ರ ಅಂಚೆ ಕಚೇರಿಯ ಆಶ್ರಯದಲ್ಲಿ ಇಂದು ಶುಕ್ರವಾರ ದೇಶಭಕ್ತಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅಂಚೆ ನಿರೀಕ್ಷಕ ಶಿವಾನಂದ ದೊಡ್ಡಮನಿಯವರು ಜನಸಾಮಾನ್ಯರಲ್ಲಿ ಒಂದು ರಾಷ್ಟ್ರ, ಒಂದು ದೇಶ ಎಂಬ ಭಾವನೆಗಳನ್ನು ಜಾಗೃತಗೊಳಿಸಲು ಮತ್ತು ನಮ್ಮ ದೇಶದ ಸ್ವಾತಂತ್ರ್ಯದ ವೈಭವದ ಗಾಥೆಯನ್ನು ಗೌರವಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಂಚೆ ಕಚೇರಿ ಪಾಲಕರಾದ ಜಿ.ಎಸ್.ಕುಲಕರ್ಣಿಯವರು ದೇಶದ ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ಸದಾ ಸ್ಮರಿಸಿಕೊಳ್ಳುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಗೌರವಿಸುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿ ಎಂದರು.
ಬರ್ಚಿ ರಸ್ತೆಯ ಮುಖ್ಯ ಅಂಚೆ ಕಚೇರಿಯಿಂದ ಆರಂಭಗೊಂಡ ಈ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ನಗರ ಸಭೆಯ ಆವರಣದಲ್ಲಿ ಸಂಪನ್ನಗೊಂಡಿತು. ಅಂಚೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ವಂದೇಮಾತರಂ’ ಎಂಬ ಘೋಷವಾಕ್ಯದೊಂದಿಗೆ ದೇಶಭಕ್ತಿ ಜಾಗೃತಿ ಜಾಥಾವನ್ನು ನಡೆಸಿದರು.