ಹೃದಯಾಘಾತದಿಂದ ಮೃತಪಟ್ಟಿರುವ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರದ ಅವರ ತವರು ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಚಿತ್ರರಂಗ, ಪೊಲೀಸ್ ಇಲಾಖೆ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು, ಸ್ಪಂದನಾರ ಪತಿ ನಟ, ವಿಜಯ್ ರಾಘವೇಂದ್ರ ತಂದೆ ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಸಹ ಸ್ಪಂದನಾರ ಅಂತಿಮ ದರ್ಶನವನ್ನು ಪಡೆದಿದ್ದಾರೆ.
ಮಲ್ಲೇಶ್ವರದ ಬಿ.ಕೆ.ಶಿವರಾಂ ನಿವಾಸದ ಬಳಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಸ್ಪಂದನಾರ ಮೃತದೇಹದ ಮುಂದೆ ನಿಂತು ಕೆಲ ಕಾಲ ಮೌನಕ್ಕೆ ಜಾರಿದರು. ಆ ಬಳಿಕ ಸ್ಪಂದನಾರ ಪತಿ ವಿಜಯ್ ರಾಘವೇಂದ್ರ ಅವರೊಟ್ಟಿಗೆ ತುಸು ಹೊತ್ತು ಮಾತನಾಡಿ ಮಾಹಿತಿ ಪಡೆದರು. ಬಳಿಕ ಅವರ ಹೆಗಲು ಮುಟ್ಟಿ ಸಾಂತ್ವಾನ ಹೇಳಿದರು. ವಿಜಯ್ ರಾಘವೇಂದ್ರ ಜೊತೆಗೆ ನಿಂತಿದ್ದ ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ಸ್ಪಂದನಾರ ಅಣ್ಣ ರಕ್ಷಿತ್ ಶಿವರಾಂ ಅವರನ್ನೂ ಮಾತನಾಡಿಸಿ ಸಾಂತ್ವಾನ ಹೇಳಿದರು. ಅಲ್ಲಿಯೇ ಇದ್ದ ವಿಜಯ್ ರಾಘವೇಂದ್ರ ಅವರ ತಂದೆ ಚಿನ್ನಣ್ಣನವರಿಗೂ ಧೈರ್ಯದಿಂದ ಇರುವಂತೆ ಹೇಳಿದರು. ಜೊತೆಗೆ ಬಿಕೆ ಶಿವರಾಂ ಅವರಿಗೂ ಸಾಂತ್ವಾನ ಹೇಳಿದರು.
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ”ಬದುಕಿ ಬಾಳಬೇಕಾದ ಜೀವ, 37 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಅವರ ಪತಿ ವಿಜಯ್ ರಾಘವೇಂದ್ರ ಒಬ್ಬ ಖ್ಯಾತ ಚಲನಚಿತ್ರ ನಟ, ಸ್ಪಂದನಾ ಅವರು ಸಹ ‘ಅಪೂರ್ವ’ ಹೆಸರಿನ ಒಂದು ಸಿನಿಮಾದಲ್ಲಿ ನಟಿದ್ದರು ಎಂದು ಕೇಳ್ಪಟ್ಟೆ. 14 ವರ್ಷದ ಮಗ ಇದ್ದಾನೆ, ಬಹಳ ಸಣ್ಣ ವಯಸ್ಸಿಗೆ ಅಗಲಿದ್ದಾರೆ, ಜೀವನದಲ್ಲಿ ಸಾಕಷ್ಟು ನೋಡುವುದು ಇತ್ತು. ಟಿವಿನಲ್ಲಿ ಅವರ ದಾಂಪತ್ಯದ ಬಗ್ಗೆ ಪ್ರಸಾರವಾದ ವರದಿಗಳನ್ನು ನೋಡಿದೆ ಬಹಳ ಸುಂದರವಾದ ಕುಟುಂಬ ಅವರದ್ದು ಅನಿಸಿತು, ಬಹಳ ಆನಂದದಿಂದ ಇದ್ದರು. ಆದರೆ ವಿಧಿ ಹೀಗೆ ಮಾಡಿದೆ. ಥಾಯ್ಲೆಂಡ್ಗೆ ಹೋಗಿ ಜೀವ ಬಿಟ್ಟಿರುವುದು ಬಹಳ ಬೇಸರ ತಂದಿದೆ. ಇಷ್ಟು ಬೇಗ ಹೀಗೆ ಆಗುತ್ತದೆ ಎಂದರೆ ಯಾರಿಗೂ ಸಹ ನಂಬಿಕೆ ಬರುತ್ತಿಲ್ಲ. ಅವರ ಕುಟುಂಬಕ್ಕೆ ಆಗಿರುವ ಬಹಳ ದೊಡ್ಡ ನಷ್ಟ ಇದು. ಬಿಕೆ ಶಿವರಾಂ ಹಾಗೂ ರಾಘವೇಂದ್ರ ಕುಟುಂಬಕ್ಕೆ ದೊಡ್ಡ ಲಾಸ್, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಎಲ್ಲ ಸಂಬಂಧಿಕರಿಗೆ, ಹಿತೈಷಿಗಳಿಗೆ ದುಖಃ ಭರಿಸುವ ಶಕ್ತಿಯನ್ನು ದೇವರು ಕೊಡಲಿ” ಎಂದು ಹಾರೈಸಿದರು ಸಿಎಂ.ಸಿಎಂ ಜೊತೆಗೆ ಮಾಜಿ ಸಚಿವ ಮುನಿರತ್ನ ಸಹ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಮುನಿರತ್ನ ಅವರು ನಿನ್ನೆಯಿಂದಲೂ ಸ್ಥಳದಲ್ಲಿ ಹಾಜರಿದ್ದಾರೆ. ಸ್ಪಂದನಾಗೆ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ಸಚಿವ ಬಿಕೆ ಹರಿಪ್ರಸಾದ್ ಅವರು ಚಿಕ್ಕಪ್ಪ ಆಗಬೇಕು. ಸ್ಪಂದನಾರ ತಂದೆ ಬಿಕೆ ಶಿವರಾಂ ಸಹೋದರರೇ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್. ಸ್ಪಂದನಾರ ಸಹೋದರ ರಕ್ಷಿತ್ ಸಹ ಕಾಂಗ್ರೆಸ್ ಪಕ್ಷದ ಮುಖಂಡರಲ್ಲೊಬ್ಬರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಂದನಾರ ಸಹೋದರ ರಕ್ಷಿತ್, ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ವಿಜಯ್ ರಾಘವೇಂದ್ರ, ರಕ್ಷಿತ್ ಪರ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿಯ ಹರೀಷ್ ಪುಂಜಾ ಎದುರು ರಕ್ಷಿತ್ ಸೋಲನುಭವಿಸಿದರು.