ಅಂಕೋಲಾ: ತಾಲೂಕಿನ ಪಳ್ಳಿಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ಕುಡಿಯುವ ನೀರಿನ ಬಾವಿಯ ನೀರು ಇದ್ದಕ್ಕಿದ್ದಂತೆ ಕಲುಷಿತಗೊಂಡಿದೆ. ವಿಷಯ ಗೊತ್ತಾಗುತ್ತಿದ್ದಂತೆ ಪುರಸಭೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಳ್ಳಿಕೇರಿಯ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಊಟ, ಉಪಹಾರಗಳಿಗೆ ಇದೇ ಬಾವಿಯಿಂದ ನೀರನ್ನು ಬಳಸಲಾಗುತ್ತಿತ್ತು. ಬಾವಿಯ ನೀರು ಕಲುಷಿತಗೊಂಡಿರುವುದನ್ನು ಗಮನಿಸಿದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾಲಕರು ಆತಂಕಗೊಂಡು ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಬಾವಿಯನ್ನು ಪರಿಶೀಲಿಸಿ ಬಾವಿಯ ನೀರನ್ನು ಯಾವುದೇ ಕಾರಣಕ್ಕೂ ಬಳಸದಂತೆ ಸೂಚನೆ ನೀಡಿದ್ದಾರೆ ಅಲ್ಲದೆ ಶಾಲೆಯ ಬಳಕೆಗೆ ಪುರಸಭೆ ವತಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಿದ್ದಾರೆ.ತಾಲೂಕು ಆರೋಗ್ಯಾಧಿಕಾರಿ ಡಾ. ನಿತಿನ್ ಹೊಸ್ಮಲಕರ ಆಗಮಿಸಿ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ.
ಶನಿವಾರದವರೆಗೆ ಸರಿಯಾಗಿಯೇ ಇದ್ದ ಬಾವಿಯ ನೀರು ಸೋಮವಾರ ಬೆಳಗ್ಗೆ ಬಂದು ನೋಡಿದರೆ ತುಂಬಾ ಹೊಲಸಾಗಿ ಬಳಕೆಗೆ ಯೋಗ್ಯವಿಲ್ಲದಂತೆ ಕಂಡು ಬಂದಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ.
ಈ ಕುರಿತಂತೆ ಪೊಲೀಸರಿಗೆ ಸಹ ಮನವಿ ನೀಡಲಾಗಿದ್ದು ಹಲವಾರು ವರ್ಷಗಳಿಂದ ಬಳಸಲ್ಪಡುತ್ತಿದ್ದ ಬಾವಿಯ ನೀರು ಏಕಾಏಕಿ ಕೆಡಲು ಕಾರಣ ಏನು ಎನ್ನುವುದು ತಿಳಿದು ಬರಬೇಕಿದೆ ಎಂದು ಶಾಲೆಯ ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.