ಅಂಕೋಲಾ: ಪಟ್ಟಣದಲ್ಲಿನ ಸಮರ್ಥ ಚಿತ್ರಮಂದಿರದ ವಾಹನ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕೊಂದನ್ನು ಕಳ್ಳರು ಕದ್ದೊಯ್ದ ಘಟನೆ ರವಿವಾರ ಸಂಜೆ ನಡೆದಿದೆ.
ಇಲ್ಲಿನ ಹನುಮಟ್ಟಾ ನಿವಾಸಿ ಕಿರಣ ದೇವಿದಾಸ ನಾಯ್ಕ ಅವರ ಬೈಕ್ ಕಳ್ಳತನವಾಗಿದೆ. ಕಿರಣ ರವಿವಾರ ಸಂಜೆ ತಮ್ಮ ಪಲ್ಸರ್ 220 ಬೈಕನ್ನು ಸಮರ್ಥ ಚಿತ್ರಮಂದಿರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಸಿನಿಮಾ ನೋಡಲು ತೆರಳಿದ್ದರು. ಈ ವೇಳೆ ಕಳ್ಳರು ಅಲ್ಲಿಂದ ಬೈಕ್ ಎಗರಿಸಿದ್ದಾರೆ. ಈ ಕುರಿತು ಕಿರಣ್ ಅವರು ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ವಾರಂತ್ಯದಲ್ಲಿಯೆ ಪಟ್ಟಣ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳು ಕಳ್ಳತನವಾಗಿದ್ದವು. ಇದೀಗ ರವಿವಾರ ಮತ್ತೊಂದು ಬೈಕ್ ಕಳ್ಳತನವಾಗುವ ಮೂಲಕ ಬೈಕ್ ಕಳ್ಳತನದ ಸರಣಿ ಮುಂದುವರೆದಿದೆ. ಸಮರ್ಥ ಚಿತ್ರಮಂದಿರವು ಜನನಿಬಿಡವಾದ ಪ್ರದೇಶವಾಗಿದ್ದರೂ ಕಳ್ಳತನವಾಗಿರುವುದರ ಹಿಂದೆ ಈ ಹಿಂದೆ ಕಳ್ಳತನ ಎಸಗಿದ್ದ ಅಥವಾ ಪರಿಣಿತ ಕಳ್ಳರ ಕೈಚಳಕವಿರುವುದು ಕಂಡುಬರುತ್ತದೆ. ಚಿತ್ರಮಂದಿರದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತದೆಯಾದರೂ ಸೂಕ್ತ ಭದ್ರತೆ ನೀಡಬೇಕಿದೆ. ಹಾಗೆಯೇ ಪಟ್ಟಣ ವ್ಯಾಪ್ತಿಯಲ್ಲಿಯೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಸಂಬಂಧಿಸಿದವರು ಪಟ್ಟಣದಲ್ಲಿ ಸಿಸಿಟಿವಿ ಸಮರ್ಪಕವಾಗಿ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಬೇಕಿದೆ.
ಹಾಗೆಯೇ ರವಿವಾರ ರಾತ್ರಿ ತಾಲ್ಲೂಕಿನ ಸುಂಕಸಾಳ ವ್ಯಾಪ್ತಿಯ ವಜ್ರಳ್ಳಿಯ ಮಾರುತಿ ನಾಯಕ ಅವರಿಗೆ ಸಂಬಂಧಿಸಿದ ಗೂಡಂಗಡಿಯಲ್ಲಿ ಕಳ್ಳರು ಅಂದಾಜು 10 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಅಲ್ಲಿಯೇ ಸಮೀಪದ ನವಮಿ ಹೋಟೆಲ್ ಬಳಿ ನಿಲ್ಲಿಸಿಟ್ಟಿದ್ದ ಪಲ್ಸರ್ ಬೈಕಿನಲ್ಲಿದ್ದ 5 ಲೀಟರ್ ಪೆಟ್ರೋಲ್ ಸಹ ಕಳ್ಳತನವಾಗಿದೆ.
ಸರಣಿ ಕಳ್ಳತನ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ.