ಆಸ್ತಿಗಾಗಿ ತಾಯಿಯನ್ನೇ ಕೊಂದ ಮಗ-ಸೊಸೆ ಅರೆಸ್ಟ್

ದೇವನಹಳ್ಳಿ, ಆ.06: ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತೆ. ಏಕೆಂದರೆ ಮಕ್ಕಳಿಗಾಗಿ ಆಕೆ ಪಡುವ ಕಷ್ಟ, ಮಾಡುವ ತ್ಯಾಗ, ಸಹನೆ ಅಷ್ಟಿಷ್ಟಲ್ಲ. ಆದ್ರೆ ಇಲ್ಲೊಬ್ಬ ಮಗ ತನ್ನ ಹೆಂಡತಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಲೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿಯಲ್ಲಿ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಹಾಗೂ ಸೊಸೆ ಕೊಲೆಗೈದ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಿನ್ನಮ್ಮ (60) ಕೊಲೆಯಾದ ಮಹಿಳೆ. ಹಿರಿಯ ಮಗ ರಾಘವೇಂದ್ರ, ಸೊಸೆ ಸುಧಾ ಕೊಲೆ ಮಾಡಿದವರು.ಬೆಂಗಳೂರು ಏರ್​​ಪೋರ್ಟ್​ ಪಕ್ಕದ 2 ಎಕರೆ‌ ಜಮೀನಿಗಾಗಿ ರಾಘವೇಂದ್ರ ತನ್ನ ತಾಯಿ ಜೊತೆ ಜಗಳ ಮಾಡಿಕೊಂಡಿದ್ದ. ಯರ್ತಿಗಾನಹಳ್ಳಿ ಬಳಿಯ ತೋಟಕ್ಕೆ ತಾಯಿ ಬರುವುದನ್ನು ನೋಡಿದ ರಾಘವೇಂದ್ರ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ‌‌ ಹಿಂದೆ ರಾಘವೇಂದ್ರ ಜಮೀನಿನ ಮೇಲೆ ಕೋಟ್ಯಂತರ ಹಣ ಪಡೆದಿದ್ದ. ಹೀಗಾಗಿ ಈಗ ಜಮೀನು ಕೊಡಲ್ಲ. ಜಮೀನನ್ನು ಕಿರಿಯ ಮಗನಿಗೆ ಕೊಡುತ್ತೇನೆ ಎಂದು ಚಿನ್ನಮ್ಮ ಮಗನಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಪ್ರತ್ಯೇಕವಾಗಿ ವಾಸವಾಗಿದ್ದರು. ಇನ್ನು ಇದೇ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಕೋರ್ಟ್​ನಲ್ಲಿ ಕೇಸ್ ಕೂಡ ನಡೆಯುತ್ತಿತ್ತು. ನಿನ್ನೆ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು ತಾಯಿಯನ್ನ ಮಗ ಮತ್ತು ಸೊಸೆ ಸೇರಿಕೊಂಡು ತೋಟದಲ್ಲಿ ಕೊಂದು ಹಾಕಿದ್ದಾರೆ ಎನ್ನಲಾಗುತ್ತಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ರಾಘವೇಂದ್ರ ಮತ್ತು ಸುಧಾಳನ್ನ ಬಂಧಿಸಿದ್ದಾರೆ.

ಶಾಲಾ ಮಕ್ಕಳಲ್ಲಿ ಹಚ್ಚಾಗಿದೆ ಪಬ್ ಹಾಗೂ ಬಾರ್ ಸಂಸ್ಕೃತಿ

ಶಾಲೆಗಳಲ್ಲಿ ಗ್ಯಾಂಗ್ ಮಾಡಿಕೊಂಡು ಫ್ರೌಢ ಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಬೆಂಗಳೂರಿನ ಪಬ್ ಹಾಗೂ ಹುಕ್ಕಾ ಸೆಂಟರ್​ಗಳಿಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಶಾಲೆಗೆ ರಜೆ ಹಾಕಿ ಪಬ್, ಹುಕ್ಕಾಬಾರ್​ಗಳಿಗೆ ಶಾಲೆ ಮಕ್ಕಳು ಹೋಗಿ ಮೋಜು ಮಸ್ತಿ ಮಾಡಿ ಅಲ್ಲಿ ತೆಗೆದುಕೊಂಡ ಫೋಟೋಸ್​ಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಾಕಿದ್ದಾರೆ. ಈ ಪೋಟೋಸ್​ಗಳು ಶಾಲಾ ಆಡಳಿತ ಮಂಡಳಿ ಕೈ ಸಿಕ್ಕಿದ್ದು ಸಿಕ್ಕಿ ಬಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಈ ಬಗ್ಗೆ ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಅನೇಕ ಶಾಲೆಗಳಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ.

ಹೀಗಾಗಿ ಕ್ಯಾಮ್ಸ್ ಖಾಸಗಿ ಶಾಲೆಗಳ ಒಕ್ಕೂಟ ಪೋಷಕರಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತ ಅದರಲ್ಲೂ ಶಾಲಾ ಮಕ್ಕಳ ಪ್ರವೇಶಕ್ಕೆ ಮತ್ತಷ್ಟು ಕಠಿಣ ನಿಯಮ ಜಾರಿಗೆ ತರುವಂತೆ ಹಾಗೂ ಪ್ರವೇಶ ನೀಡುವ ಪಬ್, ಬಾರ್ ಮಾಲೀಕರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶಾಲೆಗಳ ಸಂಘಟನೆ ಪತ್ರ ಬರೆದಿದೆ.