ಕಾರವಾರ: ಉತ್ತರ ಕನ್ಮಡ ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತೀರಾ ಅವಶ್ಯಕತೆ ಇದ್ದು, ಒಂದು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಹೊಸ ವೈದ್ಯಕೀಯ ಕಾಲೇಜಿನೊಂದಿಗೆ ಸೂಪರ್ ಸ್ಟೇಷಾಲಿಟಿ ಸೇವೆ ಲಭ್ಯವಿರುವ ಆಸ್ಪತ್ರೆಯನ್ನು ಖಾಸಗಿಯವರ ಸಹಭಾಗಿತ್ವದ ಮಾದರಿಯಲ್ಲಿ ಆರಂಭಿಸುವುದು ಅತೀ ಅವಶ್ಯಕವಾಗಿದೆ. ಈ ರೀತಿಯ ಸೇವೆ ಲಭ್ಯವಾದಲ್ಲಿ, ಜಿಲ್ಲೆಯಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆ ಮತ್ತು ಅಪಘಾತದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಜೀವಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಸೂಚನೆ ಮೇರೆಗೆ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಸಲ್ಲಿಸಿರುವ ಪ್ರಸ್ತಾವನೆಯಲ್ಲೇನಿದೆ.?
ಬೆಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮನವಿ ಮಾಡಿರುವ ಅವರು ಕುಮಟಾ ತಾಲೂಕಿನ ಸ.ನಂ ೪೦೦ ಬ ರ ಕ್ಷೇತ್ರ ೪೩-೨೦-೦ ಪೈಕಿ ೧೭-೧೪-೦ ಜಮೀನು “ಏಕಲವ್ಯ ವಸತಿ ಶಾಲೆ’ ಗೆ ಮಂಜೂರಿ ಮಾಡಿದ್ದು, ಈ ಜಾಗವನ್ನು ಆಸ್ಪತ್ರೆ ಉದ್ದೇಶಕ್ಕೆ ಬಳಸುವದಾದಲ್ಲಿ ಏಕಲವ್ಯ ವಸತಿ ಶಾಲೆ’ ಗೆ ಸೂಕ್ತವಾದ ಬೇರೆ ಸ್ಥಳವನ್ನು ಗುರುತಿಸಿ ನೀಡಲಾಗುವ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದ್ದು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಜಿಲ್ಲಾ ಆಸ್ಪತ್ರೆ, ಕಾರವಾರ ವೈದ್ಯಕೀಯ ಕಾಲೇಜಿನ ಭೋಧಕ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ೧೦ ಸರಕಾರಿ ತಾಲೂಕಾ ಆಸ್ಪತ್ರೆಗಳು ೩ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಾರ್ಯ ನಿರ್ವಹಿಸುತ್ತಿದ್ದು ಈ ಎಲ್ಲಾ ಆಸ್ಪತ್ರೆಗಳಲ್ಲಿ ಬೆರಳಣಿಕೆಯ ವೈದ್ಯರ ಸೇವೆ ಮಾತ್ರ ಲಭ್ಯವಿದೆ. ವಿಶೇಷ ಪರಿಣಿತಿ ಹೊಂದಿರುವ, ಅತೀ ಅವಶ್ಯವಿರುವ ಕಾರ್ಡಿಯಾಲೋಜಿ, ನ್ಯೂರೊಲಜಿ ಹಾಗೂ ಕ್ಯಾನ್ಸರ್ ಕಾಯಿಲೆಯ ತಜ್ಞರು ಜಿಲ್ಲೆಯಲ್ಲಿ ಲಭ್ಯವಿಲ್ಲದಿರುವುದರಿಂದ ಜನಸಾಮಾನ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಜಿಲ್ಲೆಗಳಲ್ಲಿರುವ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆಗಳ ಸೇವೆ ಪಡೆಯಲು ತೆರಳುವುದು ಅನಿವಾರ್ಯವಾಗಿದ್ದು, ತುರ್ತು ಸಮಯದಲ್ಲಿ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪಿಎಂ ಎ.ಬಿ.ಹೆಚ್.ಐ.ಎಂ ವತಿಯಿಂದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ೫೦ ಹಾಸಿಗೆಯುಳ್ಳ ತುರ್ತು ನಿಗಾ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದ್ದು, ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಳವಕಾಶದ ಕೊರತೆ ಇದೆ. ಹೀಗಾಗಿ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಸಾಕಷ್ಟು ಸ್ಥಳವಿದ್ದು ಈ ಸ್ಥಳದಲ್ಲಿ ತುರ್ತು ನಿಗಾ ಘಟಕ ಸ್ಥಾಪಿಸಲು ನಿರ್ಧಾರಿಸಲಾಗಿದೆ. ಹಾಗೂ ಈ ಸ್ಥಳ ಕಾರವಾರದಿಂದ ೨೫ ನಿಮಿಷಗಳ ಸಮಯದ ಅಂತರದಲಿದ್ದು, ನೌಕಾದಳ, ನಾಗರಿಕ ವಿಮಾನ ನಿಲ್ದಾಣ, ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿದ್ದ ಕಾರಣ ಈ ಸ್ಥಳ ಸೂಕ್ತವಾಗಿದೆ ತೀರ್ಮಾನಿಸಲಾಗಿದೆ ಎಂದೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.