ಕಡಲ್ಕೊರೆತ ತಡೆಗೆ ನೈಸರ್ಗಿಕ ಪರಿಹಾರ; ಸರ್ಕಾರ ಕಂಡುಕೊಂಡಿರುವ ಹೊಸ ವಿಧಾನ ಇಲ್ಲಿದೆ ನೋಡಿ

ಮಂಗಳೂರು: ಕರಾವಳಿ ಪ್ರದೇಶಗಳಲ್ಲಿ  ಕಡಲ್ಕೊರೆತದ ನಿರಂತರ ಸವಾಲನ್ನು ಎದುರಿಸಲು ರಾಜ್ಯ ಸರ್ಕಾರವು ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಕಡಲ್ಕೊರೆತ ತಡೆಯಲು ಗಿಡಗಳನ್ನು ನೆಡುವ ಮೂಲಕ ಪರಿಸರ ಮರುಸ್ಥಾಪನೆ ಮಾದರಿಯನ್ನು ಸರ್ಕಾರ ಪರಿಗಣಿಸುತ್ತಿದೆ ಮತ್ತು ಇತರ ಶಾಶ್ವತ ಪರಿಹಾರಗಳನ್ನು ಹುಡುಕುತ್ತಿದೆ ಎಂದು ಹೇಳಿದ್ದರು. ‘ಕಳೆದ ವರ್ಷ ಐದು ಹೆಕ್ಟೇರ್‌ನ ಕರಾವಳಿ ರಕ್ಷಣೆಗಾಗಿ ಪ್ರಕೃತಿ ಆಧಾರಿತ ಪರಿಹಾರಗಳನ್ನು ಜಾರಿಗೊಳಿಸಿದ ನಂತರ, ಅರಣ್ಯ ಇಲಾಖೆಯು ಈ ವರ್ಷ ತಣ್ಣೀರಭಾವಿ ಪ್ರದೇಶದಲ್ಲಿ ಇನ್ನೂ 15 ಹೆಕ್ಟೇರ್‌ಗೆ ಯೋಜನೆಯನ್ನು ವಿಸ್ತರಿಸಿದೆ’ ಎಂದು ಪ್ರಾದೇಶಿಕ ಪರಿಸರ ನಿರ್ದೇಶಕ ಡಾ. ದಿನೇಶ್ ಕುಮಾರ್ ವೈ.ಕೆ ಹೇಳಿದ್ದಾರೆ.

ಸಸ್ಯವರ್ಗದ ಉಪಸ್ಥಿತಿಯು ಸಮುದ್ರದ ಸವೆತ, ಚಂಡಮಾರುತದಂಥ ಬಿರುಗಾಳಿಗಳಿಗೆ ನೈಸರ್ಗಿಕ ನಿರೋಧಕವಾಗಿದೆ ಎಂದು ಸಾಬೀತಾಗಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ ನಾವು ಕಡಲ್ಕೊರೆತ ಎದುರಿಸಲು ಸಮರ್ಥನೀಯ ಕ್ರಮವಾಗಿ ಜೈವಿಕ ತಡೆಗೋಡೆಯಾಗಿ ಜೈವಿಕ ರಕ್ಷಾಕವಚವನ್ನು ಆರಿಸಿಕೊಂಡಿದ್ದೇವೆ ಎಂದು ಅವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಈ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಮತ್ತು ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಸಭೆ ನಡೆಸಲಾಗುವುದು ಎಂದು ಸಿಎಂ ತಮ್ಮ ಭೇಟಿಯ ಸಂದರ್ಭದಲ್ಲಿ ಒತ್ತಿ ಹೇಳಿದ್ದರು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಈ ಮಾದರಿಯನ್ನು ಅನುಸರಿಸಲು ಸಂಬಂಧಿಸಿದ ಇಲಾಖೆಗಳನ್ನು ಕೋರಲಾಗಿದೆ ಎಂದು ಅವರು ಹೇಳಿದ್ದರು.

ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ 3 ಕೋಟಿ ರೂಪಾಯಿ ನಿಧಿಯಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ವರ್ಷ ಸರ್ಕಾರದ ಅನುದಾನದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು ಎಂದು ದಿನೇಶ್ ಕುಮಾರ್ ಹೇಳಿದ್ದಾರೆ.

ಪ್ರಕೃತಿ-ಆಧಾರಿತ ಪರಿಹಾರಗಳಿಂದ ಜೀವವೈವಿಧ್ಯತೆಯನ್ನು ಹೆಚ್ಚಿಸುವುದು, ನೀರಿನ ಗುಣಮಟ್ಟವನ್ನು ಸುಧಾರಿಸುವುದು ಸಾಧ್ಯವಾಗಲಿದೆ. ಈ ವಿಧಾನಗಳು ಚಾಲ್ತಿಯಲ್ಲಿರುವ ಹವಾಮಾನ ಸವಾಲುಗಳನ್ನು ಎದುರಿಸಲು ನೆರವಾಗುವ ಮೂಲಕ ಪ್ರಕೃತಿಯೊಂದಿಗೆ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವಿಕೆ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುತ್ತವೆ ಎಂದು ಕುಮಾರ್ ಹೇಳಿದ್ದಾರೆ.