ನೆಟ್​ಫ್ಲಿಕ್ಸ್​​ನ ‘ದಿ ಹಂಟ್ ಫಾರ್ ವೀರಪ್ಪನ್​’ ಸಾಕ್ಷ್ಯಚಿತ್ರದಲ್ಲಿ ಏನೆಲ್ಲ ಇದೆ? ಇಲ್ಲಿದೆ ವಿವರ

ಕಾಡುಗಳ್ಳ ವೀರಪ್ಪನ್ ಕುರಿತು ಸಿದ್ಧವಾದ ಸಿನಿಮಾಗಳು ಒಂದೆರಡಲ್ಲ. ಕಾಡಿನ ಸಮೃದ್ಧತೆಯನ್ನು ನಾಶ ಮಾಡಿ, ಅಲ್ಲಿನ ಪ್ರಾಣಿ-ಪಕ್ಷಿಗಳನ್ನು ಬೇಟೆ ಆಡಿ, ಖ್ಯಾತ ನಾಮರನ್ನು ಕಿಡ್ನ್ಯಾಪ್ ಮಾಡಿದ ವೀರಪ್ಪನ್ ಬಗ್ಗೆ ಹಲವು ಕಥೆಗಳಿವೆ. ಈತನ ಕುರಿತು ಡಾಕ್ಯುಮೆಂಟರಿ ಒಂದು ಸಿದ್ಧಗೊಂಡಿದೆ. ಇಂದು (ಆಗಸ್ಟ್ 4) ನೆಟ್​ಫ್ಲಿಕ್ಸ್ ಮೂಲಕ ಇದು ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಾಕ್ಷ್ಯಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿದೆ ವಿವರ.

ನೆಟ್​ಫ್ಲಿಕ್ಸ್ ಮೂಲಕ ಬಿಡುಗಡೆ ಆದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ಆಸ್ಕರ್ ಪಡೆಯಿತು. ಈಗ ‘ದಿ ಹಂಟ್ ಫಾರ್ ವೀರಪ್ಪನ್’ ಹೆಸರಿನ ಸಾಕ್ಷ್ಯಚಿತ್ರ ಸಿದ್ಧಪಡಿಸಿ ರಿಲೀಸ್ ಮಾಡಲಾಗಿದೆ. ಈ ಡಾಕ್ಯುಮೆಂಟರಿಯನ್ನು ಸೆಲ್ವಮಣಿ ಸೆಲ್ವರಾಜನ್ ಅವರು ನಿರ್ದೇಶನ ಮಾಡಿದ್ದಾರೆ. ಇವರು ಈ ಮೊದಲು ‘ಲೈಫ್ ಆಫ್ ಪೈ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವೀರಪ್ಪನ್​ ಮೇಲೆ ಸಾಕ್ಷ್ಯ ಚಿತ್ರ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಆ ಕನಸು ಈಗ ಈಡೇರಿದೆ. ಸೆಲ್ವಮಣಿ ಅವರು ಈ ಸೀರಿಸ್​ಗಾಗಿ ನಾಲ್ಕು ವರ್ಷ ಮುಡಿಪಿಟ್ಟಿದ್ದಾರೆ. ಇಲ್ಲಿ ಅವರು ಕಾಲ್ಪನಿಕ ಕಥೆ ಹೇಳಿಲ್ಲ. ಬದಲಿಗೆ ಅಂದು ವೀರಪ್ಪನ್ ಓಡಾಡಿದ ಜಾಗ, ವೀರಪ್ಪನ್ ಜೊತೆ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ.

ವೀರಪ್ಪನ್ ಆರಂಭದ ದಿನಗಳು ಹೇಗಿತ್ತು? ಪೊಲೀಸರ ಜೊತೆ ವೀರಪ್ಪನ್ ಘರ್ಷಣೆಗೆ ಇಳಿದಿದ್ದು ಹೇಗೆ? ವೀರಪ್ಪನ್ ಹೇಗೆ ತಪ್ಪಿಸಿಕೊಳ್ಳುತ್ತಿದ್ದ ಮತ್ತಿತ್ಯಾದಿ ವಿಚಾರಗಳನ್ನು ‘ದಿ ಹಂಟ್ ಫಾರ್ ವೀರಪ್ಪನ್​’ನಲ್ಲಿ ಹೇಳಲಾಗುತ್ತಿದೆ. ಅಂದಿನ ಸಂದರ್ಭದಲ್ಲಿ ಪೊಲೀಸರಾಗಿ ಸೇವೆ ಸಲ್ಲಿಸಿದ ಅನೇಕರನ್ನು ಸೆಲ್ವಮಣಿ ಮಾತನಾಡಿಸಿದ್ದಾರೆ.

ಅಂದಿನ ಕಾಲದಲ್ಲಿ ತೆಗೆದ ಫೋಟೋಗಳು ಹಾಗೂ ವಿಡಿಯೋಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ವೀರಪ್ಪನ್ ಯಾರು ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಅದನ್ನು ಹೇಳುವ ಕೆಲಸವೂ ಇದರಲ್ಲಿ ಆಗುತ್ತಿದೆ. 1991ರಲ್ಲಿ ‘ವೀರಪ್ಪನ್’ ಹೆಸರಿನ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು. ವೀರಪ್ಪನ್ ಪಾತ್ರದಲ್ಲಿ ದೇವರಾಜ್ ಬಣ್ಣ ಹಚ್ಚಿದ್ದರು. ವೀರಪ್ಪನ್ ಆಗಿ ಕಿಶೋರ್ ನಟಿಸಿದ್ದ ‘ಅಟ್ಟಹಾಸ’ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಕಿಲ್ಲಿಂಗ್ ವೀರಪ್ಪನ್’ ಕೂಡ ಗಮನ ಸೆಳೆದಿತ್ತು.