ಟೊಮ್ಯಾಟೋ ಮುಟ್ಟಿದವರಿಗೆಲ್ಲಾ ಚಿನ್ನ ಮೆತ್ತಿಕೊಳ್ಳುತ್ತಿದೆ, ಕೋಲಾರ ಎಪಿಎಂಸಿಗೂ ಜಾಕ್​ಪಾಟ್​!

ಕೋಲಾರ, ಆಗಸ್ಟ್​ 4: ಕಳೆದ ಮೂರು ತಿಂಗಳಿಂದ ಟೊಮ್ಯಾಟೋವನ್ನು ಮುಟ್ಟಿದವರ ಬದುಕೆಲ್ಲಾ (ಗ್ರಾಹಕರನ್ನು ಹೊರತುಪಡಿಸಿ) ಚಿನ್ನ ಎನ್ನುವಂತಾಗಿದೆ, ಟೊಮ್ಯಾಟೋ ಬೆಳೆದ ರೈತರು ಲಕ್ಷಾಧೀಶ್ವರರು ಹಾಗೆ ಕೋಟ್ಯಾಧೀಶ್ವರರಾಗಿದ್ದಾರೆ, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಎಲ್ಲರಿಗೂ ಲಾಭ  ತಂದುಕೊಟ್ಟಿತ್ತು. ಜಿಲ್ಲೆಯಲ್ಲಿ ಟೊಮ್ಯಾಟೋ ನರ್ಸರಿ ಸಸಿಯೂ ಭರ್ಜರಿಯಾಗಿ ಬಿಕರಿಯಾಗ್ತಿದೆ. ಇದೀಗ, ಟೊಮ್ಯಾಟೋವನ್ನು ಮಾರಾಟ ಮಾಡಿದ ಎಪಿಎಂಸಿ ಮಾರುಕಟ್ಟೆಗೂ ದಾಖಲೆ ಪ್ರಮಾಣದಲ್ಲಿ ಕೋಟಿ ಕೋಟಿ ತೆರಿಗೆ ಹಣ ವಸೂಲಿ ಮಾಡಿಕೊಟ್ಟಿದೆ!

ಕಳೆದ ಮೂರು ತಿಂಗಳಿಂದ ಟೊಮ್ಯಾಟೋಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಟೊಮ್ಯಾಟೋ ಬೆಳೆದ ರೈತರು ಕೋಟಿಗಳ ಲೆಕ್ಕ ದಲ್ಲಿ ಆದಾಯ ಗಳಿಸಿದರೆ, ವ್ಯಾಪಾರಸ್ಥರು, ಏಜೆಂಟರು, ಚಿಲ್ಲರೆ ವರ್ತರು ಹೀಗೆ ಎಲ್ಲರೂ ಕೂಡಾ ಭರ್ಜರಿಯ ವ್ಯಾಪಾರ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡಿದ್ದಾರೆ. ಟೊಮ್ಯಾಟೋಗೆ ಔಷಧಿ, ಬಿತ್ತನೆ ಸಸಿಗಳನ್ನು ಮಾರಾಟ ಮಾಡಿದ ನರ್ಸರಿಯವರು ಕೂಡಾ ಭರ್ಜರಿ ಹಣ ಸಂಪಾದನೆ ಮಾಡಿದ್ದಾರೆ ಜೊತೆಗೆ ಹೀಗೆ ಟೊಮ್ಯಾಟೋವನ್ನು ಮುಟ್ಟಿದ ಪ್ರತಿಯೊಬ್ಬರೂ ಒಳ್ಳೆಯ ಲಾಭಗಳಿಸಿದ್ದಾರೆ.

ಅದರ ಜೊತೆಗೆ ಇಷ್ಟೆಲ್ಲಾ ವ್ಯಾಪಾರ ನಡೆದ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಕೂಡಾ ನಿರೀಕ್ಷೆ ಮೀರಿದ ರೀತಿಯಲ್ಲಿ ಬಳೆಕೆದಾರರ ಶುಲ್ಕ ಅಂದರೆ ಸೆಸ್​ ಸಂಗ್ರಹವಾಗಿದೆ. ಹೌದು ಕೇವಲ ಜಲೈ ತಿಂಗಳೊಂದರಲ್ಲೇ ಸುಮಾರು 1.24 ಕೋಟಿ ರೂಪಾಯಿ ಸೆಸ್​ ಸಂಗ್ರಹವಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆ ಯಲ್ಲಿ 100 ರೂಗೆ 60 ಪೈಸೆ ಸೆಸ್​ ವಿಧಿಸಲಾಗುತ್ತದೆ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜುಲೈ ತಿಂಗಳಲ್ಲಿ 3.12 ಲಕ್ಷ ಕ್ವಿಂಟಾಲ್​ ಟೊಮ್ಯಾಟೋ ಪೂರೈಕೆಯಾಗಿದ್ದು, ಅಂದರೆ ಜುಲೈ ತಿಂಗಳಲ್ಲಿ 15 ಕೆಜಿಯ 20.83 ಲಕ್ಷ ಬಾಕ್ಸ್​ ಟೊಮ್ಯಾಟೋ ವಹಿವಾಟು ನಡೆದಿದೆ.

ಇನ್ನು ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ ಒಂದು ಬಾಕ್ಸ್ ಟೊಮ್ಯಾಟೋ ಕನಿಷ್ಠ 930 ರಿಂದ ಗರಿಷ್ಠ 2700 ರೂಪಾಯಿವರೆಗೆ ಮಾರಾಟವಾಗಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 10.51 ಲಕ್ಷ ಕ್ವಿಂಟಾಲ್​ ಟೊಮ್ಯಾಟೋ ವಹಿವಾಟು ನಡೆದು 65.84 ಲಕ್ಷ ರೂಪಾಯಿ ಸೆಸ್​ ಸಂಗ್ರಹವಾಗಿತ್ತು. 70.06 ಲಕ್ಷ ಬಾಕ್ಸ್​ ಟೊಮ್ಯಾಟೋ 120ರೂ ರೂಪಾಯಿಗೆ ದರದಲ್ಲಿ ಮಾರಾಟವಾಗಿತ್ತು. ಆದರೆ ಈವರ್ಷ ಅದಕ್ಕಿಂತ ಕಡಿಮೆ ವಹಿವಾಟು ನಡೆದರೂ ಕೂಡಾ ದುಪ್ಪಟ್ಟು ಸೆಸ್​ ಸಂಗ್ರಹವಾಗಿದೆ ಅನ್ನೋದು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರ ಮಾತು.

ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಳಕೆದಾರರ ಶುಲ್ಕ ಅಂದರೆ ಸೆಸ್​ನ್ನು ವಿಧಿಸುತ್ತಿರುವುದಕ್ಕೆ ವ್ಯಾಪಾರಸ್ಥರಿಂದ ವಿರೋಧವೂ ಇದೆ, ಈರೀತಿ ಸೆಸ್​ ವಿಧಿಸಿದರೆ ವ್ಯಾಪಾರಸ್ಥರು ವ್ಯಾಪಾರ ಮಾಡೋದು ಕಷ್ಟವಾಗುತ್ತದೆ ಅನ್ನೋ ಕೂಗು ಇದೆ. ಸೆಸ್​ನ್ನು ಕೈಬಿಡಬೇಕು ಇಲ್ಲಾ ಇನ್ನು ಕಡಿಮೆ ಮಾಡಬೇಕು ಅನ್ನೋ ಬೇಡಿಕೆ ವ್ಯಾಪಾರಸ್ಥರಿಂದ ಇದೆ.

ಆದರೆ ಈಬಾರಿ ಇಷ್ಟೊಂದು ಸೆಸ್​ ಸಂಗ್ರಹವಾಗಿರುವ ಕಾರಣದಿಂದ ಈ ಸೆಸ್ ನಿಂದ ಸಂಗ್ರಹವಾಗಿರುವ ಹಣವನ್ನು ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಬಳಕೆ ಮಾಡಬೇಕು. ಮಾರುಟಕ್ಟೆಯಲ್ಲಿ ಸರಿಯಾದ ಲೈಟ್​ ವ್ಯವಸ್ಥೆ, ಶುಚಿತ್ವ,ಕುಡಿಯು ನೀರು, ಸೇರಿದಂತೆ ಇತರೆ ವ್ಯವಸ್ಥೆಗಳಿಗೆ ಖರ್ಚು ಮಾಡಬೇಕು ಶೀಘ್ರವಾಗಿ ಎಪಿಎಂಸಿಗೆ ಜಾಗ ಹುಡುಕಿ ಆಧುನಿಕ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಡಬೇಕು ಅನ್ನೋದು ವ್ಯಾಪಾರಸ್ಥರು ಹಾಗೂ ಮಂಡಿ ಮಾಲೀಕರಾದ ಸಿಎಂಆರ್​ ಶ್ರೀನಾಥ್, ಕೆಆರ್​ಎಸ್​ ಸುಧಾಕರ್​, ಮನವಿ ಮಾಡಿದ್ದಾರೆ.​

ಒಟ್ಟಾರೆ ಸದ್ಯದ ಪರಿಸ್ಥಿತಿಯನ್ನು ನೋಡೋದಾದ್ರೆ ಟೊಮ್ಯಾಟೋ ಚಿನ್ನವಾಗಿದ್ದು, ಟೊಮ್ಯಾಟೋ ಮುಟ್ಟಿದವರಿಗೆಲ್ಲಾ ಚಿನ್ನ ಎನ್ನುವಂತಾಗಿದೆ ಹಾಗಾಗಿ ಈ ಬಾರಿ ಟೊಮ್ಯಾಟೋ ಸುವರ್ಣಯುಗವಾಗಿದ್ದು ಟೊಮ್ಯಾಟೋದಿಂದ ಸಾಕಷ್ಟು ಜನರ ಬದುಕು ಬದಲಾಗಿದೆ, ಅದೇ ರೀತಿ ಕೋಲಾರ ಎಪಿಎಂಸಿ ಮಾರುಕಟ್ಟೆಯೂ ಕೂಡಾ ಸುಸಜ್ಜಿತವಾದ ಸ್ಥಳಕ್ಕೆ ಬದಲಾಗಿದ್ದೇ ಆದರೆ ನಿಜಕ್ಕೂ ರೈತರು ಮತ್ತು ವ್ಯಾಪಾರಸ್ಥರು ನಿಟ್ಟುಸಿರು ಬಿಡುವಂತಾಗೋದರಲ್ಲಿ ಎರಡು ಮಾತಿಲ್ಲ..