ಬೆಂಗಳೂರು: ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ರ್ಯಾಂಕಿಂಗ್ನಲ್ಲಿ 2023ನೇ ಸಾಲಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳದ ಡೈರಿ ಬ್ರ್ಯಾಂಡ್ Nandini ಒಂದು ಸ್ಥಾನ ಮೇಲಕ್ಕೇರಿದೆ. 2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ 2023ರಲ್ಲಿ ಒಂದು ಸ್ಥಾನ ಮೇಲೇರಿ 6ರಲ್ಲಿ ಗುರುತಿಸಿಕೊಂಡಿದೆ. ಮತ್ತೊಂದೆಡೆ, 2022 ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತ್ನ ಅಮುಲ್ 3 ನೇ ಸ್ಥಾನಕ್ಕೆ ಕುಸಿದಿದೆ.
ಬ್ರ್ಯಾಂಡ್ ಫುಟ್ಪ್ರಿಂಟ್ ಎಂಬ ಬ್ರ್ಯಾಂಡ್ ರ್ಯಾಂಕಿಂಗ್ ಪಟ್ಟಿಯನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಕಾಂತಾರ್ ವರ್ಲ್ಡ್ಪ್ಯಾನೆಲ್ ಪ್ರಕಟಿಸಿದೆ.
ಅಮುಲ್ vs ನಂದಿನಿ
2023 ರ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್ನ ಅಮುಲ್ ಬ್ರ್ಯಾಂಡ್ನ ಹಾಲು ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ ಎಂಬ ವಿಚಾರ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಅಮುಲ್ ವಿರುದ್ಧ ಭಾರಿ ಪ್ರತಿಭಟನೆಗಳೂ ನಡೆದಿದ್ದವು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈ ಬ್ರ್ಯಾಂಡ್ ರ್ಯಾಂಕಿಂಗ್ ಕೆಎಂಎಫ್ಗೆ ನಿರಾಳತೆ ಒದಗಿಸಲಿದೆ ಎನ್ನಲಾಗಿದೆ.
ಈ ಮಧ್ಯೆ, ಕರ್ನಾಟಕದ ಹೈನುಗಾರರಿಗೆ ಅವರ ಶ್ರಮಕ್ಕೆ ಉತ್ತಮ ಆದಾಯ ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ಕೆಎಂಎಫ್ ಮಾರಾಟ ಮಾಡುವ ಹಾಲಿನ ಬೆಲೆಯನ್ನು ಲೀಟರ್ಗೆ 3 ರೂ. ಹೆಚ್ಚಿಸಲು ನಿರ್ಧರಿಸಿದೆ.