ಬಿಂಕದಕಟ್ಟಿ ಮೃಗಾಲಯಕ್ಕೆ ಬಸ್ ಸೇವೆ: ಸಚಿವ ಎಚ್​ಕೆ ಪಾಟೀಲ್​​ ಚಾಲನೆ

ಗದಗ, ಜುಲೈ 29: ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯಕ್ಕೆ  ತೆರಳುವ ಮಕ್ಕಳು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಗದಗ ಹೊಸ ಬಸ್​ ನಿಲ್ದಾಣದಿಂದ ಬಿಂಕದಕಟ್ಟಿ ಮೃಗಾಲಯದ ವರೆಗೆ ಬಸ್​​ ಸಂಚಾರಕ್ಕೆ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಗದಗ ನಗರದ ಹೊಸ ಬಸ್ ನಿಲ್ದಾಣದಿಂದ ಇಂದು ಏರ್ಪಡಿಸಲಾದ ಸರಳ ಸಮಾರಂಭದಲ್ಲಿ ಸಚಿವರು ಬಸ್ ಸೇವೆಗೆ ಚಾಲನೆ ನೀಡಿ ಅದೇ ಸಾರಿಗೆ ಬಸ್​ನಲ್ಲಿ ಪ್ರಯಾಣ ಬೆಳೆಸಿ ಬಿಂಕದಕಟ್ಟಿ, ಅಸುಂಡಿ ಮಾರ್ಗವಾಗಿ ಮೃಗಾಲಯಕ್ಕೆ ತೆರಳಿದರು.

ಈ ಬಸ್​​ ಸಂಚಾರ ಆರಂಭದಿಂದ ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲು ಅನುಕೂಲವಾಗಲಿದೆ. ಜಿಲ್ಲಾ ಕೇಂದ್ರ ಬಸ ನಿಲ್ದಾಣ ಹಾಗೂ ಪಂ.ಪುಟ್ಟರಾಜ ಗವಾಯಿಗಳ ಬಸ ನಿಲ್ದಾಣದ ಮಾರ್ಗವಾಗಿ ಪ್ರತಿ ದಿನ ನಿಯಮಿತವಾಗಿ ಸಾರಿಗೆ ಸೇವೆ ಜನ ಸಾಮಾನ್ಯರಿಗೆ ಇಂದಿನಿಂದ ಲಭ್ಯವಿದೆ ಎಂದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕರಾದ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ.ಎಸ್. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿಪೀಕಾ ಬಾಜಪೇಯಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಬಸ್ ನಿಲ್ದಾಣದಿಂದ ಬಿಂಕದಕಟ್ಟಿ ಮೃಗಾಲಯದವರೆಗೆ ಬಸ್​ನಲ್ಲಿ ಆಗಮಿಸಿದರು.

ಮೃಗಾಲಯಕ್ಕೆ ಆರಂಭವಾದ ಬಸ್​ ಸೇವೆಯೂ ಗದಗ ಪಂ.ಪುಟ್ಟರಾಜು ಗವಾಯಿಗಳ ಬಸ ನಿಲ್ದಾಣದಿಂದ ಮೃಗಾಲಯ ಮಾರ್ಗವಾಗಿ ಅಸುಂಡಿವರೆಗೆ ಪ್ರತಿ ದಿನ ಅರ್ಧ ಗಂಟೆಗೊಮ್ಮೆ ಸಂಚರಿಸಲಿದೆ.