ಜೋಯಿಡಾ; ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಸಾಯಿ (ದಾವುಳ್ಳಿ) ಗ್ರಾಮದಲ್ಲಿ ಇರುವ ಶ್ರೀಶೈಲ ಪೀಠದ ಶಾಖಾ ಮಠದಲ್ಲಿ ಶ್ರೀ ಶೈಲಂ ಆಂದ್ರಪ್ರದೇಶದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಅಧಿಕ ಶ್ರಾವಣ ಮಾಸದ ಆ: 5 ರಿಂದ ಆ: 11 ರವರೆಗೆ ಒಂದು ವಾರ ಮೌನ ಇಷ್ಟಲಿಂಗ ಪೂಜಾನುಷ್ಠಾನ ನೆರವೇರಿಸಲಿದ್ದಾರೆ ಎಂದು ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಅವರು ಜೋಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಆ:12 ರಂದು ಕುಂಭಾರವಾಡಾದ ಶ್ರೀಕ್ಷೇತ್ರಪಾಲ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ಅಂದು ಬೆಳಿಗ್ಗೆ 11.30 ಗಂಟೆಗೆ ಧರ್ಮಸಭೆ ನಡೆಯಲಿದೆ. 36 ವರ್ಷಗಳ ನಂತರ ಶ್ರಾವಣ ಮಾಸದಲ್ಲಿ ಅಧಿಕಮಾಸ ಬಂದಿರುವುದರಿಂದ ಈ ಕಾರ್ಯಕ್ರಮ ವಿಶೇಷವಾಗಿದೆ. ಈ ಮಾಸದಲ್ಲಿ ಮೌನವೃಥ ಮಾಡಿದರೆ ಅಧಿಕ ಫಲ ಲಭಿಸುತ್ತದೆ. ಪಂಚಪೀಠ ಸ್ವಾಮಿಗಳ ಅಡಿಯಲ್ಲಿ ಇದು ಮೊದಲನೇ ಲೋಕಕಲ್ಯಾಣಾರ್ಥವಾಗಿ ಮಾಡಲಾಗುತ್ತಿರುವ ಮೌನ ವೃತವಾಗಿದೆ ಎಂದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಗಣ್ಯವ್ಯಕ್ತಿಗಳು , ಭಕ್ತರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಗಳ ಸರ್ವರು, ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪೂಜ್ಯ ಶಿವಾಚಾರ್ಯ ಸ್ವಾಮಿ ಅಂಬಿಕಾನಕರ ಹೇಳಿದರು.
ಈ ಸಂದರ್ಭದಲ್ಲಿ ವೀರಶೈವಾ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಉದಯ ಶ್ರೀಕಾಂತ ಹೂಲಿ, ಪ್ರಮುಖರಾದ ಶಂಕರಯ್ಯ ಜಡೆ, ಶಿವದೇಸಾಯಿ ಸ್ವಾಮಿ, ಬಸವರಾಜ ಬೆಂಡಿಡಿಗೇರಿಮಠ, ಸುಧಾಕರ ಕಮ್ಮಾರ, ಶಿವಾನಂದ ಶೆಟ್ಟರ, ಗುರುಶಾಂತ ಜಡೆಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.