ದಿನಕರ ಶೆಟ್ಟಿಯವರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ

ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾನ್ಯ ದಿನಕರ ಕೆ. ಶೆಟ್ಟಿಯವರು ಇಂದು ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ನೆರವೇರಿದ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ನನಗೆ ನೆಲ್ಲಿಕೇರಿ ಶಾಲೆ ಹಾಗೂ ಕಾಲೇಜಿನ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ನಾನು ಕೂಡ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೇನೆ. ಅಲ್ಲದೆ ಈ ಶಾಲೆ ಮತ್ತು ಕಾಲೇಜಿನ ಬಗ್ಗೆ ಮೊದಲಿನಿಂದಲೂ ವಿಶೇಷ ಕಾಳಜಿಯನ್ನು ಇಟ್ಟುಕೊಂಡು, ಇದರ ಅಭಿವೃದ್ಧಿಗಾಗಿ ಅಗತ್ಯ ಅನುದಾನಗಳನ್ನು ಒದಗಿಸುವಲ್ಲಿ ಮುತುವರ್ಜಿ ವಹಿಸಿದ್ದೇನೆ. ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 1,800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶೈಕ್ಷಣಿಕ ಸಾಧನೆಯಲ್ಲಿ ನೆಲ್ಲಿಕೇರಿ ಕಾಲೇಜಿನ ವಿದ್ಯಾರ್ಥಿಗಳು ಯಾವ ಖಾಸಗಿ ವಿದ್ಯಾಸಂಸ್ಥೆಗಳಿಗೂ ಕಡಿಮೆಯಿಲ್ಲದಿರುವುದು ಸಂತೋಷದ ವಿಚಾರ. ಅತ್ಯುತ್ತಮ ಉಪನ್ಯಾಸಕರನ್ನು ಹೊಂದಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ. ನಮ್ಮ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ರಂಗದ ಸುಧಾರಣೆಯನ್ನು ಪ್ರಥಮ ಆದ್ಯತೆಯಾಗಿ ಸ್ವೀಕರಿಸಿ ಪ್ರಾಮಾಣಿಕವಾಗಿ ಮುಂದೆಯೂ ಶ್ರಮಿಸಲಿದ್ದೇನೆ ಎಂದು ಹೇಳಿದರು.

ಪ್ರಾಂಶುಪಾಲ ಸತೀಶ್ ಬಿ. ನಾಯ್ಕ್, ಕೆನರಾ ಎಕ್ಸೆಲೆನ್ಸ್ ಕಾಲೇಜಿನ ಪ್ರಾಂಶುಪಾಲ ಡಿ. ಎನ್. ಭಟ್, ಹಿರಿಯ ಉಪನ್ಯಾಸಕ ಆರ್. ಎಚ್. ನಾಯ್ಕ್ ಹಾಗೂ ಎಸ್. ಎಮ್. ನಾಯ್ಕ್, ಎನ್. ಎಸ್. ಎಸ್. ಮುಖ್ಯಸ್ಥ ರಾಘವೇಂದ್ರ ಮಡಿವಾಳ, ಕ್ರೀಡಾ ವಿಭಾಗದ ಮುಖ್ಯಸ್ಥ ನಾಗರಾಜ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ನಿತ್ಯಾನಂದ ನಾಯಕ, ಪುರಸಭಾ ಸದಸ್ಯೆ ಮೋಹಿನಿ ಗೌಡ, ವಿದ್ಯಾರ್ಥಿ ಮುಂದಾಳು ಗಳಾದ ಪ್ರತೀಕ್ ಮತ್ತು ಶರದಿ ವೇದಿಕೆಯಲ್ಲಿದ್ದರು.