ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆಯ ಸಮಸ್ಯೆ ವಿದ್ಯಾರ್ಥಿಗಳಲ್ಲಿ ತೀವ್ರವಾಗಿದೆ : ಟಿ.ಎಚ್.ಓ ಅನಿಲ್ ನಾಯ್ಕ

ಹಳಿಯಾಳ: ತಾಲೂಕಿನಲ್ಲಿ ಬಹುಪಾಲು ವಿದ್ಯಾರ್ಥಿಗಳಿಗೆ ರಕ್ತ ಹೀನತೆಯ ಸಮಸ್ಯೆ ಕಾಡುತ್ತಿದೆ. ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆಯ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ. ಮಕ್ಕಳಿಗೆ ಉತ್ತಮ ಪೋಷಕಾಂಶವನ್ನು ಹೊಂದಿರುವ ಆಹಾರವನ್ನು ನೀಡಬೇಕು. ಪ್ರತಿಯೊಬ್ಬರೂ ಆರೋಗ್ಯ ನಿಯಮಾವಳಿಗಳನ್ನ ರೂಪಿಸಿಕೊಂಡು ಅದರಂತೆ ನಡೆದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರು ಹೇಳಿದರು.

ಅವರು ಇಂದು ಬುಧವಾರ ಹಳಿಯಾಳ ಪಟ್ಟಣದ ಶಿವಾಜಿ ಪ್ರೌಢಶಾಲೆಯಲ್ಲಿ, ಶಿರಸಿಯ ಸ್ಕೋಡ್ ವೆಸ್ ಸಂಸ್ಥೆಯ ಆಶ್ರಯದಡಿ ಆಯೋಜಿಸಿದ್ದ ‘ಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ರಕ್ತ ಹೀನತೆಯನ್ನು ತಡೆಗಟ್ಟುವ ಕಾರ್ಯಕ್ರಮದ ಶಿಕ್ಷಕರ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ರಕ್ತ ಹೀನತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಕೊಡ್ ವೆಸ್ ಸಂಸ್ಥೆಯವರು ತಾಲೂಕಿನ ಆಯ್ದ 25 ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ, ‘ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತ ಹೀನತೆಯನ್ನು ತಡೆಗಟ್ಟುವ ಕಾರ್ಯಕ್ರಮ’ ಅತ್ಯಂತ ಉಪಯುಕ್ತವಾಗಿದೆ ಎಂದರು.

ಸಂಸ್ಥೆಯ ಯೋಜನಾಧಿಕಾರಿ ರಿಯಾಜ್ ರವರು ಮಾತನಾಡಿ,ಲಭ್ಯ ಇರುವ ಸಮೀಕ್ಷೆಗಳ ಅಂಕಿ-ಸಂಖ್ಯೆಗಳ ಪ್ರಕಾರ, “ಉತ್ತರ ಕನ್ನಡ ಜಿಲ್ಲೆಯ ಇತರೇ ತಾಲೂಕುಗಳ ಮಕ್ಕಳ ರಕ್ತದ ಮಟ್ಟದ ಜೊತೆಗೆ ಹೋಲಿಕೆ ಮಾಡಿ ಹೇಳುವುದಾದರೆ, ಹಳಿಯಾಳ – ದಾಂಡೇಲಿ ಮತ್ತು ಮುಂಡಗೋಡ ಭಾಗಗಳ ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆ ತುಂಬಾ ಗಂಭೀರವಾಗಿದೆ ಮತ್ತು ವ್ಯಾಪಕವಾಗಿದೆ ಎಂದರು.

ಸಾಂಬ್ರಾಣಿಯ ಲೋಕಪ್ಪ ಜಿ ಗೌಡಾ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ನಾಯ್ಕ ಅವರು ಮಾತನಾಡಿ,
ತಾಲೂಕಿನ ಗ್ರಾಮೀಣ ಭಾಗದ ಬಹುಪಾಲು ಮಕ್ಕಳು ಇವತ್ತಿಗೂ ಪೋಷಕರ ನಿರಂತರ ಕಾಳಜಿ ಮತ್ತು ಉತ್ತಮ ಪೋಷಣೆಗಳಿಗೆ ಹೊರತಾಗಿ ಬೆಳೆಯುತ್ತಿದ್ದಾರೆ. ಅಂತಹ ಕಡೆಗಣಿಸಲ್ಪಟ್ಟ ಮಕ್ಕಳಿಗೆ ಈ ಯೋಜನೆಯಿಂದ ಖಂಡಿತವಾಗಿಯೂ ಒಳ್ಳೆಯ ಪ್ರಯೋಜನ ದೊರೆಯಲಿದೆ ಎಂದರು.

ಆರೋಗ್ಯ ನಿರೀಕ್ಷಕ್ಷಣಾಧಿಕಾರಿ ಎ ಐ ಖಾಜಿ ಸಾಂದರ್ಭಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕಿ ಜೂಲಿಯಾನಾ ಪೇದ್ರೂ ಫರ್ನಾಂಡಿಸ್ ಸಿದ್ಧಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಷ್ಣು ನಾಯ್ಕ್, ಶಿವಾಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಮೀನ್ ಮಮದಾಪೂರ
ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ತಾಲೂಕಿನ 17 ಶಾಲೆಗಳ 18 ಶಿಕ್ಷಕರು ಪಾಲ್ಗೊಂಡಿದ್ದರು. ಸಂಸ್ಥೆಯ ಯೋಜನಾ ಸಂಯೋಜಕ ಗಣಪತಿ ಭಟ್ ಕಾರ್ಯಕ್ರಮ ನಿರ್ವಹಿಸಿದರು.