ಹಳಿಯಾಳ : ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೆ ನಾಲ್ಕು ಯೋಜನೆಗಳನ್ನು ಅನುಷ್ಟಾನ ಪಡಿಸಿದ್ದು, ಯುವ ನಿಧಿ ಯೋಜನೆಗೆ ಡಿಸೆಂಬರ್ ತಿಂಗಳಲ್ಲಿ ಚಾಲನೆ ದೊರೆಯಲಿದೆ. ನುಡಿದಂತೆ ನಡೆದ ಮತ್ತು ನಡೆಯುವ ಸರಕಾರವಿದ್ದರೇ ಅದು ಕಾಂಗ್ರೆಸ್ ಸರಕಾರ ಮಾತ್ರ ಎಂದು ಶಾಸಕರಾದ ಆರ್.ವಿ.ದೇಶಪಾಂಡೆಯವರು ಹೇಳಿದರು.
ಅವರು ಹಳಿಯಾಳ ಪಟ್ಟಣದ ಗೃಹ ಕಚೇರಿಯಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಕ್ತಿ ಯೋಜನೆಯ ಮೂಲಕ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮವನ್ನು ಜಾರಿಗೊಳಿಸಿದ ಹೆಗ್ಗಳಿಕೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕಿದೆ ಎಂದ ಅವರು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿಯ ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರ ಜಮಾ ಮಾಡಲಾಗುತ್ತದೆ ಎಂದರು.
ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಗೃಹಜ್ಯೋತಿ ಯೋಜನೆಗೆ ಒಟ್ಟು 45,422 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಗೃಹಲಕ್ಷ್ಮೀ ಯೋಜನೆಗೆ ಕ್ಷೇತ್ರದಲ್ಲಿ 32,778 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂದರು. ಈಗಾಗಲೆ ಅತಿವೃಷ್ಟಿಯಿಂದಾದ ಹಾನಿಯಾದ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರವನ್ನು ಒದಗಿಸಲಾಗಿದೆ. 2023 ರ ಮುಂಗಾರು ಹಂಗಾಮಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನ ಪಡಿಸಲಾಗಿದೆ. ಹಳಿಯಾಳ ಮತ್ತು ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ವರ್ಷದಿಂದ ಬಿ.ಸಿ.ಎಸ್ ಕೋಸರ್್ ಪ್ರಾರಂಭಿಸಲಾಗಿದೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಫೌಂಡೇಶನ್ ನಿಂದ ಒಟ್ಟು 122 ಪ್ರತಿಭಾವಂತ ಕುಣಬಿ ವಿದ್ಯಾರ್ಥಿಗಳಿಗೆ ರೂ:2,96,000/- ವಿದ್ಯಾರ್ಥಿ ವೇತನದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್.ವಿ.ದೇಶಪಾಂಡೆಯವರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದ ಶಂಕರ್ ಬೆಂಗಾಂವಕರ್, ಕಾಂಗ್ರೆಸ್ ಮುಖಂಡರುಗಳಾದ ಸತ್ಯಜೀತ್ ಗಿರಿ, ಸಂಭಾಜಿ ವಾಲೇಕರ್ ಮೊದಲಾದವರು ಉಪಸ್ಥಿತರಿದ್ದರು.