ಭಟ್ಕಳ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘದಲ್ಲಿ ಹೈಡ್ರಾಮಾ

ಭಟ್ಕಳ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ವೇಳೆ ನಡೆದ ಗೌಜಿ, ಗದ್ದಲದಿಂದ ಸುದ್ದಿಯಾಗಿದ್ದ ಭಟ್ಕಳ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘದ ಮೊದಲ ಸಭೆಯಲ್ಲಿಯೂ ಎರಡು ಮಹಿಳಾ ಗುಂಪುಗಳು ಪರಸ್ಪರ ವಾಗ್ವಾದ ನಡೆಸಿದ್ದು, ಸಭೆ ನಡೆಸಲು ಪ್ರಧಾನ ವ್ಯವಸ್ಥಾಪಕರು ಹಿಂದೇಟು ಹಾಕಿದ ಕಾರಣ ಅಧ್ಯಕ್ಷೆ ನಯನಾ ನಾಯ್ಕ, ಉಪಾಧ್ಯಕ್ಷೆ ಸುಕನ್ಯಾ ಸೇರಿದಂತೆ 7 ಸದಸ್ಯರು ಸಂಘದ ಕಚೇರಿಯಲ್ಲಿ  ರಾತ್ರಿಯವರೆಗೂ ಧರಣಿ ನಡೆಸಿದ ಘಟನೆ ನಡೆದಿದೆ.

ಸಂಜೆ 3 ಗಂಟೆಗೆ ಸಂಘದ ನಿರ್ದೇಶಕ ಮಂಡಳಿ ಸಭೆಯನ್ನು ನಿಗದಿಪಡಿಸಿ ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ನಾಯ್ಕ ಜಾರಿ ಮಾಡಿದ ನೋಟಿಸ್ ಹಿಡಿದು ಹೆಚ್ಚಿನ ಸದಸ್ಯೆಯರು ಸಭೆಗೆ ಆಗಮಿಸಿದ್ದರು. ಆದರೆ ಸಭೆ ನಿಗದಿ ಮಾಡಿರುವ ಬಗ್ಗೆ ತಕರಾರು ತೆಗೆದ ಸದಸ್ಯೆ ಚಂದ್ರಪ್ರಭಾ ನಾಯ್ಕ, ಲಕ್ಷ್ಮೀ ನಾಯ್ಕ ಮತ್ತಿತರರು, ಅಧ್ಯಕ್ಷೆ, ಉಪಾಧ್ಯಕ್ಷೆಯರ ಆಯ್ಕೆ ಕಾನೂನು ಬಾಹೀರವಾಗಿದೆ. ಈ ಬಗ್ಗೆ ನಾವು ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರಿಗೆ (ಎಆರ್) ದೂರು ನೀಡಿದ್ದು, ದೂರು ಸ್ವೀಕೃತಗೊಂಡಿದೆ. ಸದರಿ ದೂರಿನ ಕುರಿತು ಎಆರ್ ಅವರು ಆದೇಶ ನೀಡುವವರೆಗೂ ಅಧ್ಯಕ್ಷೆ ಹುದ್ದೆಯಲ್ಲಿರಲು ನಯನಾ ನಾಯ್ಕ ಅರ್ಹತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಈ ಸಭೆಯನ್ನು ಮುಂದೂಡಬೇಕು. ಎಆರ್ ಆದೇಶದ ನಂತರ ಹೊಸದಾಗಿ ಸಭೆಯ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ತಿರುಗೇಟು ನೀಡಿದ ಅಧ್ಯಕ್ಷೆ ನಯನಾ ನಾಯ್ಕ, ಉಪಾಧ್ಯಕ್ಷೆ ಸುಕನ್ಯಾ ಮತ್ತಿತರರು, ನಮಗೆ 13 ಸದಸ್ಯೆಯರ ಪೈಕಿ 7 ಸದಸ್ಯರ ಬೆಂಬಲವಿದೆ. ಎಲ್ಲ 7 ಸದಸ್ಯೆಯರು ಈ ಸಭೆಗೆ ಹಾಜರಾಗಿದ್ದೇವೆ. ನಮ್ಮ ಆಯ್ಕೆಯನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿ ಪ್ರಮಾಣ ಪತ್ರವನ್ನು ನೀಡಿದ್ದು, ಈ ಸಭೆಯನ್ನು ಮುಂದೂಡಲು ಯಾವುದೇ ಸಕಾರಣ ಇಲ್ಲ.

ನಮ್ಮ ಆಯ್ಕೆಗೆ ಸಂಬಂಧಿಸಿದಂತೆ ಸಹಾಯಕ ನಿಬಂಧಕರ ಕಚೇರಿಗೆ ಯಾರಾದರೂ ದೂರು ಸಲ್ಲಿಸಿದರೆ ಅದನ್ನು ಎದುರಿಸಲು ನಾವು ಸಮರ್ಥರಿದ್ದೇವೆ. ನಮ್ಮ ವಿರುದ್ಧ ನೀಡಿರುವ ದೂರಿನ ಬಗ್ಗೆ ಎಆರ್ ಯಾವುದೇ ಆದೇಶ ನೀಡಿಲ್ಲ. ಅಲ್ಲದೇ ನಮ್ಮ ಆಯ್ಕೆಗೆ ಎಆರ್ ಅಥವಾ ಯಾವುದೇ ನ್ಯಾಯಾಲಯವೂ ತಡೆಯಾಜ್ಞೆ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಭೆಯನ್ನು ನಡೆಸುವುದು ಬೇಡ ಎಂದರೆ ಅರ್ಥವೇನು, ಈ ಹಿಂದಿನ ಅವಧಿಯಲ್ಲಿ ಸಂಘದಲ್ಲಿ ಯಾವುದಾದರೂ ಭ್ರಷ್ಟಾಚಾರ ಅಥವಾ ಕಾನೂನು ಬಾಹೀರ ವ್ಯವಹಾರ ನಡೆದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಂಘಕ್ಕೆ ಹೊಸ ಅಧ್ಯಕ್ಷರು ಬಾರದಂತೆ, ಸಭೆ ನಡೆಸದಂತೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.

ಸಭೆಯನ್ನು ನಡೆಸಿ ಇಂದಿನ ಚರ್ಚೆ, ಬೆಳವಣಿಗೆಯನ್ನು ಠರಾವು ಪ್ರತಿಯಲ್ಲಿ ದಾಖಲಿಸಬೇಕು. ಸಭೆ ಮುಂದೂಡುವುದಾದರೆ ಅದನ್ನೂ ಅಲ್ಲಿಯೇ ಬರೆಯಬೇಕು, ಸಹಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಪ್ರಕಟಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಅನಿರ್ದಿಷ್ಟಾವಧಿ ಅವಧಿಯವರೆಗೆ ಸಂಘದ ಕಚೇರಿಯಲ್ಲಿಯೇ ಧರಣಿ ನಡೆಸುವುದಾಗಿ ಘೋಷಿಸಿದರು.

ಕಚೇರಿಯಿಂದ ಹೊರ ನಡೆದ ಪ್ರಧಾನ ವ್ಯವಸ್ಥಾಪಕಿ:
ಸಂಘದ ಕಚೇರಿಯ ಒಳಗೆ ಎರಡೂ ಬಣದ ವಾಗ್ವಾದ ತಾರಕಕ್ಕೆ ಏರುತ್ತಿದ್ದಂತೆಯೇ ಸಭೆಯನ್ನು ನಡೆಸಲು ಹಾಗೂ ಯಾವುದೇ ಠರಾವು ಬರೆಯಲು ಒಪ್ಪದ ಸಂಘದ ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ನಾಯ್ಕ, ಅನಾರೋಗ್ಯದ ಕಾರಣದಿಂದ ತಮಗೆ ಕಚೇರಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಯ ಅಗತ್ಯ ಇದೆ ಎನ್ನುತ್ತಾ ಕಚೇರಿಯಿಂದ ಹೊರಗೆ ತೆರಳಿದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷೆ ನಯನಾ ನಾಯ್ಕ ಹಾಗೂ ಅವರ ಬಣದ ಸದಸ್ಯೆಯರು, ಸಂಘದ ಕಚೇರಿಯ ಒಳಗೆ ಕುಳಿತು ಧರಣಿಗೆ ಮುಂದಾದರು. 

 ಪರಸ್ಪರ ಆರೋಪ, ಪ್ರತ್ಯಾರೋಪ:
ಸಭೆ ನಿಗದಿಯ ಬಗ್ಗೆ ಗದ್ದಲ ಮುಂದುವರೆಯುತ್ತಿದ್ದಂತೆಯೇ ಸಂಘದ ಕಚೇರಿಯಿಂದ ಹೊರ ಬಂದ ಅಧ್ಯಕ್ಷೆ ನಯನಾ ನಾಯ್ಕ ಹಾಗೂ ವಿರೋಧಿ ಬಣದ ಸದಸ್ಯೆ ಚಂದ್ರಪ್ರಭಾ ನಾಯ್ಕ, ಸುದ್ದಿಗಾರರ ಮುಂದೆ ಪರಸ್ಪರ ಆರೋಪಗಳ ಸುರಿಮಳೆಗರೆದರು. ಸೋಮವಾರ ಸಭೆ ನಡೆಸಲು ಬಿಡದ ಬಗ್ಗೆ ಪೊಲೀಸ್ ಹಾಗೂ ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಅಧ್ಯಕ್ಷೆ ನಯನಾ ನಾಯ್ಕ ತಿಳಿಸಿದರೆ, ಸಂಘದ ಸ್ಥಾಪನೆ, ಬೆಳವಣಿಗೆಗೆ ದುಡಿದವರು, ತ್ಯಾಗ ಮಾಡಿದವರು ಇದ್ದಾರೆ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ ಕಾನೂನು ಬಾಹೀರವಾಗಿದ್ದು, ಇದರ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಎಆರ್ ನಮ್ಮ ದೂರಿನ ಬಗ್ಗೆ ಆದೇಶ ನೀಡುವವರೆಗೂ ಸಭೆ ನಡೆಸಬಾರದು ಎಂದು ಸದಸ್ಯೆ ಚಂದ್ರಪ್ರಭಾ ನಾಯ್ಕ ಪ್ರತ್ಯಾರೋಪ ಮಾಡಿದರು.