ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ದೋಣಿಯಿಂದ ಜಾರಿ ಸಮುದ್ರಕ್ಕೆ ಬಿದ್ದು ತಾಲೂಕಿನ ಭಾವಿಕೇರಿ ಹರಿಕಂತ್ರವಾಡದ ಮೀನುಗಾರರೋರ್ವರು ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು ಭಾವಿಕೇರಿ ಗ್ರಾಮದ ನಿವಾಸಿ ವಿಠ್ಠಲ ಗೋವಿಂದ ಹರಿಕಂತ್ರ (49) ಮೃತಪಟ್ಟ ಮೀನುಗಾರ. ಮೃತರು ಶ್ರೀ ಆರ್ಯಾದುರ್ಗಾ ದೋಣಿಯ ಮೇಲೆ ಸಮುದ್ರಕ್ಕೆ ಬಲೆ ಹಾಕಿ ಮೀನು ಹಿಡಿಯುತ್ತಿರುವ ಸಂದರ್ಭದಲ್ಲಿ ಸಮುದ್ರದ ಅಲೆಗೆ ಪಾತಿದೋಣಿ ರೋಲ್ ಆಗಿದ್ದರಿಂದ ಸಮುದ್ರದ ನೀರಿಗೆ ಬಿದ್ದು, ಅಸ್ವಸ್ಥನಾಗಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವರಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಕುರಿತು ಸಹ ಮೀನುಗಾರ ಚಂದ್ರಕಾಂತ ಮನೋಹರ ಹರಿಕಂತ್ರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ