ಅಂಕೋಲಾ: ಅಂಕೋಲಾ ತಾಲ್ಲೂಕಿನಲ್ಲಿ ಮ್ಯಾಂಗನೀಸ್ ಅದಿರು ವ್ಯವಹಾರದ ಸಂದರ್ಭದಲ್ಲಿ ರಸ್ತೆ ಅಪಘಾತಗಳು ಅಧಿಕವಾಗಿ ಆತಂಕ ಮೂಡಿಸಿದ್ದವು. ವರ್ಷ ಉರುಳಿದಂತೆ ಅಕ್ರಮ ಅದಿರು ವ್ಯವಹಾರ ತಾಲೂಕಿನಲ್ಲಿ ಹಲವು ಆತಂಕಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಅದೆಲ್ಲವೂ ನಿವಾರಣೆಯಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವ ಮುನ್ನವೇ ಸರಣಿ ಕಳ್ಳತನದ ಭೂತ ಅಟ್ಟಿಸಿಕೊಂಡು ಬಂದಂತಾಗಿತ್ತು.
ಅಂಕೋಲಾದಲ್ಲಿ ಕಳೆದ ಕೆಲವು ವರ್ಷಗಳಿಂದ ಸರಣಿ ಕಳ್ಳತನ ಪ್ರಕರಣಗಳು ಆಗಾಗ ಕಂಡು ಬರುತ್ತಲೇ ಇತ್ತು. ದೇವಸ್ಥಾನಗಳ ಸರಣಿ ಕಳ್ಳತನ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾಗಲೇ ಪೊಲೀಸರು ಅದನ್ನು ಜಾಣ್ಮೆಯಿಂದ ಭೇದಿಸಿದ್ದರು. ಎರಡು ವರ್ಷಗಳ ಹಿಂದೆ ತಾಲೂಕಿನ ಹಲವು ಮನೆಗಳನ್ನು ದೋಚಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ಕೊಳ್ಳೆ ಹೊಡೆದಿದ್ದರು. ಮನೆಗಳ ಸರಣಿ ಕಳ್ಳತನ ಪೊಲೀಸರಿಗೆ ತಲೆನೋವು ತಂದಿತ್ತು. ಹಲವು ದಿನಗಳ ಸತತ ಕಾರ್ಯಾಚರಣೆಯ ಮೂಲಕ ಅದನ್ನು ಭೇದಿಸಲಾಗಿತ್ತಾದರೂ ಅದರ ತಾತ್ವಿಕ ಅಂತ್ಯ ಇದುವರೆಗೆ ತಿಳಿದು ಬಂದಿಲ್ಲ. ಅದರ ನೆನಪು ಮಾಸುವ ಮುನ್ನವೇ ಇದೀಗ ಬೈಕ್ ಕಳ್ಳತನ ಪ್ರಕರಣ ಮತ್ತೆ ತಾಲೂಕಿನಲ್ಲಿ ಸರಣಿ ಕಳ್ಳತನದ ಆತಂಕವನ್ನು ನೆನಪಿಸುವಂಥಾಗಿದೆ.
ಶನಿವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿಟ್ಟ ಬೈಕೊಂದು ಕಳ್ಳತನವಾಗಿರುವ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಮಠಾಕೇರಿಯ ಸುಭಾಶ್ ನಾಯ್ಕ ಅವರು ದೂರು ನೀಡಿದ್ದು, ವೈಯಕ್ತಿಕ ಕೆಲಸದ ನಿಮಿತ್ತ ಕುಮಟಾ ತೆರಳಿದ್ದರಿಂದ ಮುಖ್ಯ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ತಮ್ಮ ಬೈಕ್ ಇಟ್ಟಿದ್ದರು. ವಾಪಸ್ ಬರುವ ವೇಳೆಗೆ ಬೈಕ್ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರವಿವಾರ ಮುಂಜಾನೆ ಬೈಕ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ಮತ್ತೊಂದು ದೂರು ದಾಖಲಾಗಿದ್ದು ಶನಿವಾರ ತಡರಾತ್ರಿ ಇಲ್ಲವೇ ರವಿವಾರ ನಸುಕಿನಲ್ಲಿ ಬೈಕ್ ಕಳ್ಳತನವಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲಿನ ವಂದಿಗೆ ನಿವಾಸಿ ರಾಜೇಶ್ ಶಿವಾನಂದ ಶೆಟ್ಟಿ ದೂರು ನೀಡಿದ್ದು, ಅಂಕೋಲಾ – ಕುಮಟಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶ್ರೀ ಮಂಜುನಾಥ ಸ್ಟೋರ್ಸ್ ಎದುರಿಗೆ ನಿಲ್ಲಿಸಿಟ್ಟಿದ್ದ ಅವರ ಬೈಕ್ ಕಳ್ಳತನವಾಗಿದೆ ಎಂದು ದೂರಲಾಗಿದೆ.
ಸಮೀಪದಲ್ಲಿಯೇ ಇನ್ನೊಂದು ಬೈಕ್ ಕಳ್ಳತನಕ್ಕೂ ಪ್ರಯತ್ನ ನಡೆಸಲಾಗಿದ್ದು ಅದು ವಿಫಲವಾಗಿದೆ. ವಂದಿಗೆ ಮೇಲ್ಭಾಗದ ಪರಿವೀಕ್ಷಣ ಮಂದಿರದ ರಸ್ತೆಯ ಅಡ್ಡ ತಿರುವಿನ ಮನೆಯೊಂದರಲ್ಲಿ ನಿಲ್ಲಿಸಿಟ್ಟ ಬೈಕನ್ನು ಶನಿವಾರ ರಾತ್ರಿ ಕಳ್ಳತನ ಮಾಡುವ ಪ್ರಯತ್ನ ನಡೆಸಲಾಗಿದೆ. ಕದ್ದೊಯ್ಯುವ ಆತುರದಲ್ಲಿ ಬೈಕ್ ಗೆ ಹಾನಿಯಾಗಿದೆ.
ಈ ಮೂರು ಪ್ರಕರಣಗಳು ಪ್ರತ್ಯೇಕವಾಗಿದ್ದರೂ ಸಮೀಪದಲ್ಲಿಯೆ ಮತ್ತು ಒಂದೇ ಮಾರ್ಗದಲ್ಲಿ ನಡೆದಿವೆ ಹಾಗೂ ಮೂರು ಘಟನೆಗಳು ಶನಿವಾರ ಸಂಜೆಯಿಂದ ರವಿವಾರ ನಸುಕಿನಲ್ಲಿ ನಡೆದಿದೆ. ಈ ಕಾರಣದಿಂದ ಮತ್ತೆ ಸರಣಿ ಆತಂಕದ ಭೀತಿ ಎದುರಾಗಿದೆ.
ಇದೇ ವೇಳೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಪಟ್ಟಣದ ಅಂಬಾರಕೊಡ್ಲಾ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿದ್ದ ಚೀಲವೊಂದನ್ನು ಕದ್ದೊಯ್ದಿದ್ದು ಸಾರ್ವಜನಿಕರು ಜಾಗ್ರತರಾಗಿರಬೇಕು ಎನ್ನುವ ಅಡಿ ಬರಹವನ್ನು ಒಳಗೊಂಡ ವಿಡಿಯೋವೊಂದು ಶನಿವಾರ ಮತ್ತು ರವಿವಾರ ಸಾಮಾಜಿಕ ಜಾಲತಾಣಗಳ ಮೂಲಕ ತಾಲೂಕಿನಲ್ಲೇಡೆ ಹರಿದಾಡಿ ಗಂಭೀರತೆ ಸೃಷ್ಟಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಸ್ಪಷ್ಟೀಕರಣ ನೀಡಿರುವ ಅಂಕೋಲಾ ಪೊಲೀಸ್ ಠಾಣೆ, ಪರಿಚಿತರ ಸಮ್ಮತಿಯ ಮೇರೆಗೆ ಬೈಕ್ ನಲ್ಲಿದ್ದ ಜಾಕೆಟ್ ಅನ್ನು ವ್ಯಕ್ತಿಯೋರ್ವ ತೆಗೆದುಕೊಂಡಿದ್ದು ಇದು ಕಳ್ಳತನ ಪ್ರಕರಣವಲ್ಲ ಹಾಗಾಗಿ ವಿಡಿಯೋವನ್ನು ಶೇರ್ ಮಾಡಿ ಮುಜುಗರ ಉಂಟುಮಾಡದಂತೆ ಪ್ರಕಟಣೆ ಮೂಲಕ ತಿಳಿಸಿದೆ.