ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ವತಿಯಿಂದ ವೃಕ್ಷಾರೋಪಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ


ಅಂಕೋಲಾ: ಅಂಕೋಲಾ ಸಿಟಿ ಲಯನ್ಸ್ ಕ್ಲಬ್, ಪೂರ್ಣ ಪ್ರಜ್ಞಾ ಸಮೂಹ ವಿದ್ಯಾಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ಗಣಪತಿ ವ್ಹಿ. ನಾಯಕ ಮಾತನಾಡಿ, ಪರಿಸರ ನಮ್ಮ ಆಸ್ತಿ. ಅದನ್ನು ಉಳಿಸುವ ಕಾರ್ಯ ಮತ್ತು ಪರೋಕ್ಷವಾಗಿ ಜೀವಿಗಳನ್ನು ಉಳಿಸುವ ಕಾರ್ಯ ನಮ್ಮಿಂದಾಗಬೇಕು. ಅದು ಜಮಾಂದೋಲನವಾಗಬೇಕು ಎಂದು ಆಶಿಸಿದರು.
ಪೂರ್ಣ ಪ್ರಜ್ಞಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಪ್ರಶಾಂತ ನಾಯಕ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಪ್ರತಿಯೊಬ್ಬರು ಪ್ರತಿ ಮನೆಯಿಂದಲೂ ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಲಯನ್ಸ್ ಅಂಕೋಲಾ ಸಿಟಿಯ ಅಧ್ಯಕ್ಷರಾದ ಲಾ. ಡಾ. ವಿಜಯದೀಪ ಮಾತನಾಡಿ, ಸದೃಢ ಸಮಾಜ ಮತ್ತು ಆರೋಗ್ಯಕ್ಕಾಗಿ ಆಮ್ಲಜನಕದ ಮಹತ್ವ ತಿಳಿಸಿ, ಪ್ರಕೃತಿದತ್ತವಾದ ಆಲದ ಮರಗಳು, ತುಳಸಿ, ಬೇವಿನ ಗಿಡಗಳು ನಮ್ಮ ಆರೋಗ್ಯ ರಕ್ಷಣೆಗಾಗಿ ನೀಡುವ ಕೊಡುಗೆ ಅಪಾರವಾದದ್ದು. ಗಿಡಗಳನ್ನು ನೆಟ್ಟು ಪೋಷಿಸಿ, ಎಂದರು.
ಈ ಸಮಾರಂಭದಲ್ಲಿ ಔಷಧಿ ಉಪಯುಕ್ತ ವೃಕ್ಷಾರೋಹಣ ಜೊತೆಗೆ ವಿನೂತನವಾಗಿ ಪರಿಸರ ಸ್ನೇಹಿ ಸೀಡ್‌ಪೆನ್ಸಿಲ, ಸೀಡ್ ಪೆನ್ನು ಮತ್ತು “ಸೀಡ್‌ಬಾಲನ್ನು ಶಾಲಾ/ಕಾಲೇಜು/ನರ್ಸರಿ ಮಕ್ಕಳಿಗೆ ವಿತರಿಸುವ ಮೂಲಕ ವಿನೂತನ ಜಾಗೃತಿ ಮೂಡಿಸಲಾಯಿತು.
ನರ್ಸರಿ ಮಕ್ಕಳಿಗಾಗಿ ಏರ್ಪಡಿಸಲಾದ ಪರಿಸರ ಕುರಿತು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಲಾಯಿತು.
ಸುಧಾ ಶೆಟ್ಟಿ ಶೆಟ್ಟಿಯವರ ಗಣೇಶ ಸ್ತುತಿಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕಾಯದರ್ಶಿ ಎಂ.ಜೆ.ಎಫ್. ಪ್ರದೀಪ ರಾಯ್ಕರ ಸ್ವಾಗತಿಸಿದರು. ಖಜಾಂಚಿ ಲಾ. ಉದಯಾನಂದ ನೇರಲಕಟ್ಟೆ ವಂದಿಸಿದರು. ಲಾ. ಎನ್.ಎಚ್. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಪತಂಜಲಿ ಯೋಗ ಸಮಿತಿಯ ವಿನಾಯಕ ಗುಡಿಗಾರ ಮತ್ತು ಅವರ ಸಹಯೋಗಿಗಳು ಕಾಲೇಜಿನ ಮತ್ತು ಪ್ರೌಢಶಾಲಾ ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.