ಬೆಳಗಾವಿ, ಜುಲೈ 31: ಆದೇಶ ಉಲ್ಲಂಘಿಸಿ ಅರಣ್ಯ ಪ್ರದೇಶದಲ್ಲಿರುವ ಜಲಪಾತದ ಬಳಿ ಅಧಿಕಾರಿಗಳು ಮದ್ಯದ ಪಾರ್ಟಿ ನಡೆಸಿದ ಪ್ರಕರಣ ಸಂಬಂಧ ಕೈಬಿಡಲಾಗಿದ್ದ ಇತರ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಅರಣ್ಯ ಇಲಾಖೆಗೆ ಆದೇಶಿಸಿದ್ದಾರೆ.
ಅರಣ್ಯ ವ್ಯಾಪ್ತಿಯ ಫಾಲ್ಸ್ಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಜುಲೈ 27 ರಂದು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಉಲ್ಲಂಘನೆ ಮಾಡಿ ಹೆಸ್ಕಾಂ ಸಿಬ್ಬಂದಿ, ವೈದ್ಯರು ಮದ್ಯದ ಪಾರ್ಟಿ ನಡೆಸಿ ಮೋಜು ಮಸ್ತಿ ಮಾಡಿದ್ದರು.
ಪ್ರಕರಣ ಸಂಬಂಧ ವೈದ್ಯ ಸೇರಿ ನಾಲ್ವರ ವಿರುದ್ಧ ಜಾಂಬೋಟಿ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಿಸಿ ಉಳಿದ ನಾಲ್ವರನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ಟಿವಿ9 ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾಧಿಕಾರಿ ನಿತೇಸ್ ಪಾಟೀಲ್ ಉಳಿದ ನಾಲ್ವರ ವಿರುದ್ಧವೂ ದೂರು ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಭಾರೀ ಮಳೆ ಹಿನ್ನೆಲೆ ಜಲತಾಗಳು ದುಮ್ಮಿಕ್ಕುತ್ತಿದೆ, ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯ ಜಾಂಬೋಟಿ ಬಳಿ ಇರುವ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಅದರಂತೆ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆದರೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಹೆಸ್ಕಾಂ ಅಧಿಕಾರಿಗಳು ಮತ್ತು ವೈದ್ಯರ ತಂಡ ಜಲಪಾತದ ಬಳಿ ಮದ್ಯದ ಪಾರ್ಟಿ ನಡೆಸಿದ್ದರು. ಅಷ್ಟೇ ಅಲ್ಲದೆ, ಅಲ್ಲೇ ಅಡುಕೆ ಮಾಡಿ ಸೇವನೆ ಮಾಡಿದ್ದರು.